ಬಿಜೆಪಿಯ ಅನೇಕ ನಾಯಕರು ಮಹಿಳೆಯರ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಅವರ ಕುಟುಂಬದಲ್ಲಿನ ಹೆಣ್ಣು ಮಕ್ಕಳಿಗೆ ತಾಯಿಗೆ, ಮಡದಿಗೂ ಗೌರವ ನೀಡುವುದಿಲ್ಲ ಎನಿಸುತ್ತದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. “ಬಿಜೆಪಿಯವರು ಸಿಬಿಐ ಸಂಸ್ಥೆಯನ್ನು ತಮ್ಮ ಮನೆ ಸರಕಿನಂತೆ ಭಾವಿಸಿದ್ದಾರೆ. ಮನೆಗೆಲಸದವರನ್ನು ಬಳಸಿಕೊಂಡಂತೆ ಸಿಬಿಐ ಬಳಸಿಕೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಸಿ.ಟಿ. ರವಿ ಆಡಿರುವ ಮಾತು, ನಡೆದುಕೊಂಡಿರುವ ರೀತಿ, ಪದೇ ಪದೆ ಹೆಣ್ಣು ಮಕ್ಕಳ ಬಗ್ಗೆ ಆಡಿರುವ ಮಾತು ಬಿಜೆಪಿಗೆ ಶೋಭೆ ತರುತ್ತದೆಯೇ?” ಎಂದು ಪ್ರಶ್ನಿಸಿದರು.
ಸಂಸ್ಕೃತಿ ಬಗ್ಗೆ ಮಾತನಾಡುತ್ತಾ ಜನರ ಮುಂದೆ ಬರುವ ಬಿಜೆಪಿಗರಿಗೆ ಆ ಸಂಸ್ಕೃತಿ ಎಲ್ಲಿ ಹೋಯ್ತು? ಆರ್ ಎಸ್ ಎಸ್ ಹೇಳಿಕೊಡುವ ಸಂಸ್ಕೃತಿ ಇದೇನಾ? ಬಿಜೆಪಿ ನಾಯಕರು ನಿರಂತರವಾಗಿ ಮಹಿಳೆಯರ ಜತೆ ನಡೆದುಕೊಳ್ಳುವ ರೀತಿ ನೀತಿಯನ್ನು ರಾಜ್ಯದ ಜನ ಗಮನಿಸಬೇಕು” ಎಂದರು.
ಬಿಜೆಪಿ ನಾಯಕರಿಗೆ ಸಂಸ್ಕೃತಿ ಬಗ್ಗೆ ಪಾಠ ಮಾಡುವ ಆರ್ ಎಸ್ ಎಸ್ ನವರು ಈಗಲಾದರೂ ಅವರಿಗೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.
“ಕನ್ನಡಿಗರು ಸುಸಂಸ್ಕೃತರು ಎಂಬ ಭಾವನೆ ದೇಶದಲ್ಲಿದೆ. ವಿರೋಧ ಪಕ್ಷಗಳ ನಾಯಕರು ಪದೇ ಪದೆ ಮಹಿಳೆಯರ ವಿರುದ್ಧ ಧೋರಣೆ ಅನುಸರಿಸುತ್ತಿರುವುದರಿಂದ ರಾಜ್ಯದ ಗೌರವ ಕಡಿಮೆಯಾಗುವುದಿಲ್ಲವೇ? ಕಳೆದ ಹತ್ತು ವರ್ಷಗಳಿಂದ ಮಹಿಳೆಯರ ಮೇಲೆ ಬಿಜೆಪಿ ನಾಯಕರ ಉಪಟಳಗಳು ಹೆಚ್ಚಾಗಿವೆ. ಇದೆಲ್ಲವನ್ನು ನೋಡಿದಾಗ, ಮೌಲ್ಯಗಳು ಕುಸಿಯುತ್ತಿವೆ, ಓಲೈಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.
ನನ್ನನ್ನು ಅನಗತ್ಯ ತಿರುಗಾಡಿಸಿದರು, ಎನ್ ಕೌಂಟರ್ ಮಾಡುವ ಸಾಧ್ಯತೆ ಇತ್ತು ಎಂಬ ಆರೋಪದ ಬಗ್ಗೆ ಕೇಳಿದಾಗ, “ಸಿ.ಟಿ. ರವಿ ಏನು ಬೇಕಾದರೂ ಆರೋಪ ಮಾಡುತ್ತಾರೆ. ಆರೋಪ ಮಾಡುವುದರಲ್ಲಿ, ಮಾತು ತಿರುಚುವುದರಲ್ಲಿ ಸಿ.ಟಿ. ರವಿ ನಿಪುಣ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಹೆಚ್ಚಾಗಿ ಮಾತನಾಡಿದರೆ ಅವರ ಬಗ್ಗೆ ಏನು ಮಾತನಾಡಬೇಕೋ ಮಾತನಾಡುತ್ತೇನೆ. ಅವರು ಮಾಡಿರುವ ತಪ್ಪಿಗೆ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೋರುವುದು ಒಳಿತು ಎಂಬುದು ನನ್ನ ಭಾವನೆ. ಅವರ ಮನೆಯಲ್ಲೂ ಮಹಿಳೆಯರಿದ್ದಾರೆ. ತಾಯಿ ಜನ್ಮ ಕೊಟ್ಟರೆ ಮಾತ್ರ ಎಲ್ಲರೂ ಆಚೆ ಬರಲು ಸಾಧ್ಯ. ಇಲ್ಲದಿದ್ದರೆ ಇವರು ಆಚೆ ಬರಲು ಆಗುವುದಿಲ್ಲ. ಕಳೆದ 10 ವರ್ಷಗಳಿಂದ ಇವರು ಬೇರೆ ದಾರಿ ಕಂಡುಕೊಂಡಿದ್ದಾರೋ ಏನೋ ಗೊತ್ತಿಲ್ಲ” ಎಂದು ತಿರುಗೇಟು ನೀಡಿದರು