ಪುತ್ತೂರು:ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ, ದೇಯಿ ಬೈದೇತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ.೧ರಿಂದ ೫ರ ತನಕ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಸಮಾಲೋಚನಾ ಸಭೆ, ಆಮಂತ್ರಣ ವಿತರಣೆಯು 9ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.
ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಮಾಜಿ ಕಾರ್ಯನಿರ್ವಹಣಾಽಕಾರಿ ಆರ್.ಸಿ.ನಾರಾಯಣ ಮಾತನಾಡಿ, ಕೋಟಿ-ಚೆನ್ನಯರು ಕೇವಲ ಬಿಲ್ಲವ ಸಮಾಜಕ್ಕೆ ಸೀಮಿತವಲ್ಲ.ಗೆಜ್ಜೆಗಿರಿ ಜಾತ್ರೆಯು ತುಳುನಾಡಿನ ಜಾತ್ರೆಯಾಗಬೇಕು.ಯಾವುದೇ ಅಪವಾದ ಬಾರದಂತೆ ಜಾತ್ರೆ ನಡೆಯಬೇಕು.ಜಾತ್ರೆಯ ಮೂಲಕ ಹಿಂದು ಸಮಾಜ ಒಂದಾಗಬೇಕು.ಗ್ರಾಮ ಸಮಿತಿ ಮೂಲಕ ಎಲ್ಲಾ ಮನೆಗಳಿಗೂ ಆಮಂತ್ರಣ ತಲುಪಬೇಕು ಎಂದರು.
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಗೆಜ್ಜೆಗಿರಿಯಲ್ಲಿ ನಡೆಯುವ ಈ ವರ್ಷದ ಜಾತ್ರೋತ್ಸವವು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರಲಿ.ಗೆಜ್ಜೆಗಿರಿ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿದ್ದು ಮುಂದೆ ಪ್ರವಾಸಿ ಕೇಂದ್ರವಾಗಿ ಬೆಳೆಯಬೇಕು.ಹನುಮಗಿರಿಯಂತೆ ಪ್ರವಾಸಿಗರು ಗೆಜ್ಜೆಗಿರಿಗೂ ಬರಬೇಕು.ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಪ್ರವಾಸಿಕೇಂದ್ರವಾಗಿ ಬೆಳೆಯಲು ಸರಕಾರದ ದೊಡ್ಡ ಮಟ್ಟದ ಅನುದಾನ ದೊರೆಯಬೇಕು.ಸಂಘಟನೆ ಜಾತ್ರೆಗೆ ಸೀಮಿತವಾಗಿರದೇ ಕ್ಷೇತ್ರದ ಅಭಿವೃದ್ಧಿಗೂ ಪೂರಕವಾಗಿರಲಿ, ಪಕ್ಷಾತೀತವಾಗಿ ಅಭಿವೃದ್ಧಿಯಾಗಲಿ ಎಂದರು.
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಬ್ರಹ್ಮಬೈದೇರುಗಳ ನೇಮೋತ್ಸವವನ್ನು ಹಲವು ಕಡೆ ಕಂಡಿದ್ದೇವೆ.ಆದರೆ ಗೆಜ್ಜೆಗಿರಿ ಕೋಟಿ-ಚೆನ್ನಯರ ಮಾತೃ ಸ್ಥಾನವಾಗಿದೆ.ಬ್ರಹ್ಮಕಲಶೋತ್ಸವದಲ್ಲಿ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿದ ಕ್ಷೇತ್ರವಾಗಿದ್ದು ಇಲ್ಲಿನ ಜಾತ್ರೋತ್ಸವ ಜಿಲ್ಲೆಯಲ್ಲಿ ಮಾದರಿಯಾಗಿ ನಡೆಯಲಿ ಎಂದರು.
ಡಾ.ಗೀತ್ ಪ್ರಕಾಶ್ ವಿಟ್ಲ ಮಾತನಾಡಿ, ತುಳುನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು.ಹಿಂದೂ ಅಂದ ಮೇಲೆ ಅಲ್ಲಿ ಜಾತಿ ವಿಚಾರ ಬರಬಾರದು.ಗೆಜ್ಜೆಗಿರಿಯ ಕಾರ್ಯಕ್ರಮದ ಮೂಲಕ ಹಿಂದೂ ಸಮಾಜದಲ್ಲಿ ಜಾಗೃತಿಯಾಗಲಿ.ಜಾತಿಯೆಂಬ ಸಂಕುಚಿತ ಮನೋಭಾವ ಬಿಟ್ಟು ಪ್ರತಿಯೊಬ್ಬರೂ ವಿಶಾಲ ಮನೋಭಾವದಿಂದ ಗೆಜ್ಜೆಗಿರಿಯ ಜಾತ್ರೋತ್ಸವದಲ್ಲಿ ಭಾಗವಹಿಸಬೇಕು ಎಂದರು.
ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ,ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕಾರ್ಯದರ್ಶಿ ಜಯವಿಕ್ರಮ ಮಾತನಾಡಿ, ಕೋಟಿ-ಚೆನ್ನಯರ ಆರಾಧನೆ ಒಂದು ಜಾತಿಗೆ ಸೀಮಿತವಲ್ಲ.ಉಭಯ ಜಿಲ್ಲೆಗಳಲ್ಲಿರುವ ಗರಡಿಗಳಲ್ಲಿ ಎಲ್ಲಾ ಜಾತಿಯವರು ಸೇರಿಕೊಂಡು ಬೈದೇರುಗಳ ನೇಮ ನಡೆಯುತ್ತಿದ್ದು ಗೆಜ್ಜೆಗಿರಿಯಲ್ಲಿಯೂ ತುಳುನಾಡಿನ ಎಲ್ಲರೂ ಸೇರಿಕೊಂಡು ನಡೆಯಬೇಕು ಎಂದರು.
ಮಹಿಳಾ ಸಂಚಾಲಕಿ ಉಷಾ ಅಂಚನ್ ಮಾತನಾಡಿ, ಕ್ಷೇತ್ರದಲ್ಲಿ ನಡೆದ ಅಷ್ಠಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಜಾತ್ರೋತ್ಸವದಲ್ಲಿ ಎ.೨ರಂದು ಮಹಿಳೆಯರಿಗೆ ಮಡಿಲು ತುಂಬಿಸುವ ಸೇವೆಯು ಗೆಜ್ಜೆಗಿರಿ ಕ್ಷೇತ್ರದಲ್ಲಿ ವಿಶೇಷವಾಗಿ ನಡೆಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸದಸ್ಯ ಐತ್ತಪ್ಪ ಪೇರಲ್ತಡ್ಕ ಮಾತನಾಡಿ,ಬಿಲ್ಲವ ಸಮುದಾಯ ಒಟ್ಟು ಸೇರುವ ಅವಕಾಶ ಗೆಜ್ಜೆಗಿರಿ ಜಾತ್ರೋತ್ಸವದಲ್ಲಿ ದೊರೆತಿದೆ.ಈ ಅವಕಾಶ, ಹಿಂದುತ್ವ ರಾಜಕೀಯಕ್ಕೆ ಸೀಮಿತವಾಗಿರದೆ ಆಚರಣೆಯಲ್ಲಿರಬೇಕು ಎಂದರು.
ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಕಂಡಿದ್ದು ಇತಿಹಾಸಕ್ಕೆ ನಾವು ಸಾಕ್ಷಿಯಾಗಿದ್ದೇವೆ.ಹಿಂದುಗಳಾದ ನಮಗೆ ಧರ್ಮ ಪ್ರಧಾನವಾಗಿರಬೇಕು.ಜಾತಿ, ಪಕ್ಷ ನಂತರವಾದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ.ಗೆಜ್ಜೆಗಿರಿ ಜಾತ್ರೋತ್ಸವದಲ್ಲಿ ನಮಗೂ ಭಾಗವಹಿಸುವ ಅವಕಾಶ ದೊರೆತಿದ್ದು ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾಮದಲ್ಲಿ ಮನೆ ಮನೆಗೆ ಆಮಂತ್ರಣ ತಲುಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಕೋಟಿ-ಚೆನ್ನಯರ ಮೂಲ ಸ್ಥಾನ ಗೆಜ್ಜೆಗಿರಿ ಒಂದು ಸಮಾಜಕ್ಕೆ ಸಂಬಂಽಸಿದ ಕ್ಷೇತ್ರವಲ್ಲ.ಇದು ಎಲ್ಲಾ ಸಮಾಜಕ್ಕೆ ಸಂಬಂಽಸಿದೆ.ಎರಡು ರಾಜಕೀಯ ಪಕ್ಷಗಳ ಆಡಳಿತದಲ್ಲಿಯೂ ಸರಕಾರದಿಂದ ಗೆಜ್ಜೆಗಿರಿಗೆ ಅನುದಾನ ಬಂದಿದೆ.ಇನ್ನಷ್ಟು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಕ್ಷೇತ್ರದಲ್ಲಿ ರಾಜಕೀಯವಿಲ್ಲ.ಎಲ್ಲಾ ಪಕ್ಷದ ಪ್ರತಿನಿಽಗಳು ಸಮಾನ. ಟ್ರಸ್ಟ್‌ಗೆ ನೂತನ ಪದಾಽಕಾರಿಗಳ ಆಯ್ಕೆಯಾಗಿದ್ದು ಮುಂದೆ ಟ್ರಸ್ಟಿಗೆ ಪುತ್ತೂರಿನವರನ್ನು ಸೇರಿಸಿಕೊಳ್ಳಲಾಗುವುದು.
ಮಡಿಲಕ್ಕಿ ಸೇವೆ ಹಣಕ್ಕಾಗಿ ಮಾಡಿಲ್ಲ.ಒಂಬತ್ತು ವಿವಿಧ ಸಮಾಜದವರನ್ನು ಸೇರಿಸಿಕೊಂಡು ಮಾಡಲಾಗಿದೆ.ಇದು ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ಗೆಜ್ಜೆಗಿರಿಯ ಜಾತ್ರೆಯನ್ನು ತುಳುನಾಡಿನ ಜಾತ್ರೆಯಾಗಿ ಮಾಡುವ ಮೂಲಕ ಇತಿಹಾಸ ಮರುಕಳಿಸುವ ಪ್ರಯತ್ನ ಮಾಡಲಾಗುವುದು.ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನರಿಮೊಗರು ಕೈಪಂಗಲ ಬಾರಿಕೆ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ವೇದನಾಥ ಸುವರ್ಣ, ಪುತ್ತೂರು ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ವಿಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲಕೃಷ್ಣ ಪೂಜಾರಿ ಕೊಡಿಪ್ಪಾಡಿ, ನಾರಾಯಣ ಪೂಜಾರಿ ಕುರಿಕ್ಕಾರ, ಜಯಪ್ರಕಾಶ್ ಬದಿನಾರು, ಮಾಧವ ಸಾಲಿಯಾನ್ ಮುಂಡೂರು ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಶಿವಪ್ರಸಾದ್ ರೈ ಮಠಂತಬೆಟ್ಟು,ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಟೆಲಿಕಾಂನ ಸದಸ್ಯ ನಿತೀಶ್ ಶಾಂತಿವನ, ಸೇಸಪ್ಪ ನೆಕ್ಕಿಲು, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಪೂಜಾರಿ, ಕುಂಡಡ್ಕ ಬಿಲ್ಲವ ಸಂಘದ ನಾರಾಯಣ ಪೂಜಾರಿ ಕುಂಡಡ್ಕ, ಲೋಹಿತ್ ಕುಂಡಡ್ಕ, ಹಿರೇಬಂಡಾಡಿ ಗ್ರಾಮ ಸಮಿತಿ ಅಧ್ಯಕ್ಷ ನವೀನ್ ಪಡ್ಪು, ಬಜತ್ತೂರು ಗ್ರಾಮ ಸಮಿತಿ ಅಧ್ಯಕ್ಷ ಸೋಮಸುಂದರ್, ಆನಂದ ಪೂಜಾರಿ ಸರ್ವೆದೋಳ, ವೇದಾವತಿ, ವಿನಯ ವಸಂತ, ಸುಧಾಕರ ಪೂಜಾರಿ ಕೇಪು, ಜಿನ್ನಪ್ಪ ಪೂಜಾರಿ ಮುರ, ಹರೀಶ್ ಬಲ್ನಾಡು, ಬಾಲಕೃಷ್ಣ ಮುರ, ಸಜ್ಜನ್ ಕುಮಾರ್ ಮುಂಡೂರು, ಚಂದ್ರಶೇಖರ ಎನ್.ಎಸ್.ಡಿ ಸರ್ವೆದೋಳ, ನ್ಯಾಯವಾದಿ ಉಲ್ಲಾಸ್, ಭರತ್ ಕೆದಂಬಾಡಿ, ಸಂಜೀವ ಪೂಜಾರಿ ವಿಟ್ಲ, ಯಶೋಧ ಸಹಿತ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಶ್ರೀಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ ಕೆ.ಬಿ ಸ್ವಾಗತಿಸಿ, ವಂದಿಸಿದರು.ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಮಂತ್ರಣ ವಿತರಿಸಲಾಯಿತು.
ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳು ಇದ್ದು ಇದಕ್ಕೆ ಪ್ರಶ್ನಾ ಚಿಂತನೆ ನಡೆಸಲಾಗಿದೆ.ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಂತೆ ಇದೆಲ್ಲವನ್ನೂ ಮುಂದಿನ ಒಂದು ವರ್ಷದಲ್ಲಿ ಸರಿಪಡಿಸಲು ಪ್ರಯತ್ನಿಸಲಾಗುವುದು.ಅಲ್ಲದೆ ಕ್ಷೇತ್ರದ ಸಮೀಪದಲ್ಲಿರುವ 4 ಎಕರೆ ಜಾಗ ಖರೀದಿಗೆ ಚಿಂತನೆ ನಡೆಸಲಾಗಿದ್ದು ಅದರಲ್ಲಿ ನಾರಾಯಣ ಗುರುಗಳ ಧ್ಯಾನ ಮಂದಿರ ಹಾಗೂ ಆಯುರ್ವೇದ ಆಸ್ಪತ್ರೆ ಪ್ರಾರಂಭಿಸುವ ಯೋಜನೆಯಿದೆ
–ಜಯಂತ ನಡುಬೈಲು, ಗೌರವಾಧ್ಯಕ್ಷರು
ಶ್ರೀಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ
ಗೆಜ್ಜೆಗಿರಿಯಲ್ಲಿ ಐದು ವರ್ಷಗಳ ಹಿಂದೆ ಅದ್ದೂರಿ ಬ್ರಹ್ಮಕಲಶ ನಡೆದು ಪ್ರತಿವರ್ಷ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಗೆಜ್ಜೆಗಿರಿಯು ಕಾರಣಿಕ ಕ್ಷೇತ್ರವಾಗಿದೆ.ಕ್ಷೇತ್ರದಲ್ಲಿ ಮಾ.1ರಿಂದ 5ರ ತನಕ ಜಾತ್ರಾ ಮಹೋತ್ಸವ ನಡೆಯಲಿದೆ.ಗೆಜ್ಜೆಗಿರಿ ಜಾತ್ರೆಯು ಒಂದು ಸಮಾಜಕ್ಕೆ ಸೀಮಿತವಾದ ಉತ್ಸವ ಅಲ್ಲ.ಇದು ಸಮಸ್ತ ತುಳುವರ ಜಾತ್ರೋತ್ಸವವಾಗಿದೆ.ಇದರ ಆಮಂತ್ರಣ ಬಿಡುಗಡೆಯಾಗಿದೆ.ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ
–ಡಾ.ರಾಜಾರಾಮ ಕೆ.ಬಿ., ಪ್ರಧಾನ ಕಾರ್ಯದರ್ಶಿ
ಶ್ರೀಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ