ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಇಂದು ಗುರುವಾರ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ದೆಹಲಿಯ 9ನೇ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರ ಜೊತೆಗೆ ಹೊಸದಾಗಿ ಆಯ್ಕೆಯಾದ ಆರು ಶಾಸಕರು – ಪರ್ವೇಶ್ ವರ್ಮಾ, ಆಶಿಶ್ ಸೂದ್, ಪಂಕಜ್ ಸಿಂಗ್, ಮಂಜಿಂದರ್ ಸಿಂಗ್ ಸಿರ್ಸಾ, ಕಪಿಲ್ ಮಿಶ್ರಾ ಮತ್ತು ರವೀಂದರ್ ಇಂದ್ರಜ್ ಅವರು ಸಹ ನೂತನ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಮೂಲಕ ದೆಹಲಿಯಲ್ಲಿ ನಾಲ್ಕನೇ ಬಾರಿಗೆ ಮಹಿಳಾ ಶಾಸಕರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಕಾಂಗ್ರೆಸ್ ನಿಂದ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಾರ್ಟಿಯಿಂದ ಆತಿಶಿ ದೆಹಲಿಯ ಮುಖ್ಯಮಂತ್ರಿಯಾಗಿದ್ದರು.
ದೆಹಲಿಯಲ್ಲಿ ಬಿಜೆಪಿ 26 ವರ್ಷಗಳ ನಂತರ ಅಧಿಕಾರಕ್ಕೆ ಮರಳಿದ್ದು, ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಇತರ ಹಿರಿಯ ಬಿಜೆಪಿ ನಾಯಕರು ಮತ್ತು ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಭಾಗವಹಿಸಿದ್ದಾರೆ.
ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ 50 ವರ್ಷದ ಮೊದಲ ಬಾರಿ ಶಾಸಕಿಯಾಗಿರುವ ರೇಖಾ ಗುಪ್ತಾ ಅವರನ್ನು 8ನೇ ದೆಹಲಿ ವಿಧಾನಸಭೆಯ ನಾಯಕಿಯಾಗಿ ಆಯ್ಕೆ ಮಾಡಲಾಯಿತು.
ಪಕ್ಷದ ನಾಯಕರ ಪ್ರಕಾರ, ರೋಹಿಣಿ ಕ್ಷೇತ್ರದ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರನ್ನು ದೆಹಲಿ ವಿಧಾನಸಭೆಯ ಹೊಸ ಸ್ಪೀಕರ್ ಆಗಿ ನೇಮಿಸಲಾಗಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಹೊಸ ಸಚಿವರ ಮಂಡಳಿಯು ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ದೆಹಲಿ ಸಚಿವಾಲಯದಲ್ಲಿ ತನ್ನ ಮೊದಲ ಸಭೆ ನಡೆಸುವ ಸಾಧ್ಯತೆಯಿದೆ. ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಬಹುದು, ಇದರ ಅಡಿಯಲ್ಲಿ ಅರ್ಹ ಮಹಿಳೆಯರು ಮಾಸಿಕ 2,500 ರೂಪಾಯಿಗಳ ಪಾವತಿಯನ್ನು ಪಡೆಯುತ್ತಾರೆ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ ಸೌಲಭ್ಯ ಪಡೆಯುತ್ತಾರೆ.
ಫೆಬ್ರವರಿ 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದು ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯ ದಶಕದ ಆಡಳಿತವನ್ನು ಬಿಜೆಪಿ ಕೊನೆಗೊಳಿಸಿತು. 1993-98ರಲ್ಲಿ ಬಿಜೆಪಿ ಕೊನೆಯ ಬಾರಿಗೆ ದೆಹಲಿಯಲ್ಲಿ ಅಧಿಕಾರದಲ್ಲಿತ್ತು.
ರೇಖಾ ಗುಪ್ತಾ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಅಧ್ಯಕ್ಷೆ ಮತ್ತು ನಾಗರಿಕ ಮಂಡಳಿ ಸದಸ್ಯೆಯಾಗಿರುವ ಅವರು ಮದನ್ ಲಾಲ್ ಖುರಾನಾ, ಸಾಹಿಬ್ ಸಿಂಗ್ ವರ್ಮಾ ಮತ್ತು ಸುಷ್ಮಾ ಸ್ವರಾಜ್ ನಂತರ ದೆಹಲಿಯ ನಾಲ್ಕನೇ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಪ್ರಸ್ತುತ ಏಕೈಕ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರಿಗಿದೆ.
ಈ ತಿಂಗಳ ಆರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಎಎಪಿ ಅಭ್ಯರ್ಥಿ ಬಂದಾನ ಕುಮಾರಿ ಅವರನ್ನು 29,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಶಾಲಿಮಾರ್ ಬಾಗ್ ಸ್ಥಾನವನ್ನು ಗೆದ್ದರು.