ವಿಟ್ಲ: ದೈವ ನರ್ತಕನನ್ನು ಬೆದರಿಸಿ, ಹಣ ಮತ್ತು ಚೆಕ್ ವಸೂಲಿ ಮಾಡಿದ ಬಗ್ಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಂಟ್ವಾಳ ಎಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶಿಸಿದೆ.
ವಿಟ್ಲದ ದ.ಕ. ಜಿಲ್ಲಾ ದಲಿತ ಸಂಘದ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲದ ನೆಕ್ಕರೆಕಾಡು ನಿವಾಸಿ ಕಮಲಾ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ಸಂತ್ರಸ್ತ ಆನಂದ ಸುರುಳಿಮೂಲೆ ವಿಟ್ಲ ಠಾಣೆಗೆ ದೂರು ನೀಡಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ ವಕೀಲ ಶಿವಾನಂದ ವಿಟ್ಲ ಮೂಲಕ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ನಲಿಕೆ ಸಮುದಾಯಕ್ಕೆ ಸೇರಿದ ವಿಟ್ಲ ಸುರುಳಿಮೂಲೆ ನಿವಾಸಿ ಆನಂದ ದೈವ ನರ್ತನೆಯ ಜತೆಗೆ ನಾಟಿ ವೈದ್ಯ ಹಾಗೂ ಜೋತಿಷಿ ವೃತ್ತಿಯನ್ನು ಮಾಡುತ್ತಿದ್ದರು. ಕಮಲಾ ಸಮಸ್ಯೆಯ ಪರಿಹಾರಕ್ಕಾಗಿ ಆನಂದ ಅವರ ಬಳಿ ಬಂದಿದ್ದು, ಈ ವೇಳೆ ಅವರು ಬಾಧೆ ತೆಗೆಯಲು ಪೂಜೆ ಮಾಡುವಂತೆ ಸೂಚಿಸಿ ಅದರ ವೆಚ್ಚ 15 ಸಾವಿರ ರೂ. ನೀಡಬೇಕೆಂದು ತಿಳಿಸಿದ್ದರು. ಪೂಜೆ ಮಾಡಿದ ಅನಂತರ ಆ ಮಹಿಳೆ ಮತ್ತು ಅವಳ ಪತಿ ಬಾಲಕೃಷ್ಣ ಪೂಜೆಯ ಹಣವನ್ನು 1 ತಿಂಗಳಲ್ಲಿ ಪಾವತಿಸುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಹಣದ ಬಗ್ಗೆ ವಿಚಾರಿಸಿದಾಗ, ನನ್ನಲ್ಲಿ ಹಣ ಕೇಳಿದರೆ ನಿನ್ನ ಮೇಲೆ ಅತ್ಯಾಚಾರದ ಕೇಸು ದಾಖಲಿಸುವುದಾಗಿ ಬೆದರಿಸಿದ್ದಾರೆ.