ಮಾರ್ಚ್ 6 ರಂದು ಮದುವೆಯಾಗಿದ್ದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ದಂಪತಿ ಆರತಕ್ಷತೆ ಕಾರ್ಯಕ್ರಮ ಇಂದು (ಮಾರ್ಚ್ 09) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು, ಸಿನಿಮಾ ತಾರೆಯರು ಭಾಗವಹಿಸಿ ನವದಂಪತಿಗಳಿಗೆ ಶುಭಹಾರೈಸಿದರು.
ಮುಖ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರಿಗೂ ಆಹ್ವಾನ ನೀಡಲಾಗಿದ್ದು, ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ನಗುಮೊಗದಿಂದ ಶುಭ ಹಾರೈಸಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರು ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಇನ್ನು ಮಡದಿಗೆ ಸಿದ್ದರಾಮಯ್ಯನವರನ್ನು ಪರಿಚಯ ಮಾಡಿಕೊಟ್ಟರು
ಸಿಎಂ ಸಿದ್ದರಾಮಯ್ಯನವರ ಜತೆ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಆಗಮಿಸಿದ್ದರು. ರಾಜಕೀಯ ಬದ್ಧ ವೈರಿಯಾಗಿರುವ ತೇಜಸ್ವಿ ಸೂರ್ಯ ಅವರಿಗೆ ಹೂ ಗುಚ್ಛ ನೀಡಿ ಮದ್ವೆಯ ಶುಭಾಶಯ ತಿಳಿಸಿದರು. ಈ ವೇಳೆ ಪರಸ್ಪರ ಅಪ್ಪಿಕೊಂಡು ಎಲ್ಲರ ಗಮನಸೆಳೆದರು.
ಸಿಎಂ ಸಿದ್ದರಾಮಯ್ಯನವರು ಬರುವ ಮೊದಲೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಆಗಮಿಸಿ ತೇಜಸ್ವಿ ಸೂರ್ಯ ದಂಪತಿಗೆ ಶುಭ ಹಾರೈಸಿದರು.
ಅಷ್ಟೇ ಅಲ್ಲದೆ ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಗೋಪಾಲಯ್ಯ, ಅಣ್ಣಾ ಮಲೈ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ರಿಸೆಪ್ಷನ್‌ಗೆ ಆಗಮಿಸಿ ಶುಭ ಹಾರೈಸಿದರು. ಸಿನಿಮಾ ನಟ ರಮೇಶ್ ಅರವಿಂದ್ ಕೂಡಾ ಮದುವೆಗೆ ಆಗಮಿಸಿ ದಂಪತಿಯನ್ನು ಹರಸಿದ್ದಾರೆ.
ತೇಜಸ್ವಿ ಸೂರ್ಯ ಅವರ ಕೈ ಹಿಡಿದ ಶಿವಶ್ರೀ ಸ್ಕಂದ ಪ್ರಸಾದ್ ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಜೈವಿಕ ಎಂಜಿನಿಯರಿಂಗನಲ್ಲಿ ಬಿ.ಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ. ಚೆನ್ನೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಿಂದ ಸಂಸ್ಕೃತ ಎಂ.ಎ ಪದವಿ ಪಡೆದುಕೊಂಡಿದ್ದಾರೆ. ಹಾಡು, ನೃತ್ಯದ ಜತೆಗೆ ಸೈಕ್ಲಿಂಗ್, ಚಾರಣದಲ್ಲಿ ಆಸಕ್ತಿ ಹೊಂದಿದ್ದಾರೆ.