ಬೆಳಗಾವಿ: ಎರಡು ಮಕ್ಕಳಿರುವ ವ್ಯಕ್ತಿಯೋರ್ವ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿರುವ ಘಟನೆ ಬೆಳಗಾವಿಯ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದು ಇಡೀ ಮಾನವ ಕುಲವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯವಾಗಿದೆ. ಬಾಲಕಿ ಬಾಣಂತಿಯಾದ ವಿಚಾರ ಗೊತ್ತಾಗುತ್ತಿದ್ದಂತೆ ಪೋಷಕರು ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಪ್ರಕರಣದಡಿಯಲ್ಲಿ ಆರೋಪಿ ಬಸಪ್ಪ ಅಡಿವೆಪ್ಪ ಹಳ್ಳೂರ್(32) ಎನ್ನುವಾತನನ್ನು ಬಂಧಿಸಿದ್ದಾರೆ.
ಟ್ರ್ಯಾಕ್ಟರ್ ಡ್ರೈವರ್ ಆಗಿರುವ ಬಸಪ್ಪ ಅಡಿವೆಪ್ಪ ಹಳ್ಳೂರ ಎಂಬಾತನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳು ಸಹ ಇವೆ. ಆದರೂ ಸಹ ಬಸಪ್ಪ ಅಪ್ರಾಪ್ತೆ ಬಾಲಕಿಯನ್ನು ಪುಸಲಾಯಿಸಿ ಆಕೆಯೊಂದಿಗೆ ನಿರಂತರವಾಗಿ ದೈಹಿಕ ಸಂಪರ್ಕ ಬೆಳಸಿದ್ದಾನೆ. ಪರಿಣಾಮ ಬಾಲಕಿ ಇದೀಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ
ಆರೋಗ್ಯ ಮತ್ತು ದೇಹದಲ್ಲಿ ಕೊಂಚ ವ್ಯತ್ಯಾಸ ಕಂಡು ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಆಕೆ ಪೋಷಕರು ಶಾಕ್ ಆಗಿದ್ದಾರೆ. ಬಳಿಕ ಬಾಲಕಿ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಆರೋಪಿ ಬಸಪ್ಪ ಅಡಿವೆಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.