ಉಜಿರೆಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಎಪ್ರಿಲ್ 6ರಂದು ಧರ್ಮಸ್ಥಳದಲ್ಲಿ ನಡೆಯಬೇಕಾಗಿದ್ದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಂದಿನ ವಿಚಾರಣೆ ವರೆಗೂ ಪ್ರತಿಭಟನೆ ನಡೆಸದಂತೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿತು. ಅರ್ಜಿದಾರರ ಪರ ವಕೀಲರು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಚರ್ಚೆ ನಡೆಸಿರುವ ಕುರಿತಂತೆ ವಾಟ್ಸ್‌ಆ್ಯಪ್ ಸಂದೇಶ ಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ಅಲ್ಲದೆ ಈ ಸಂದೇಶಗಳು ನ್ಯಾಯಾಲಯ ಈ ಹಿಂದೆ ಧರ್ಮಸ್ಥಳ ದೇವಾಲಯ ಹಾಗೂ ಧರ್ಮಾಧಿಕಾರಿಗಳ ಪರವಾಗಿ ಹೊರಡಿಸಿದ್ದ ಆದೇಶಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ. ಅಲ್ಲದೆ ಬಲವಂತವಾಗಿ ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ ಚರ್ಚೆ ನಡೆದಿದೆ ಎಂದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಪ್ರತಿಭಟನೆಗೆ ಮಧ್ಯಾಂತರ ತಡೆ ನೀಡಿತು. ಅಲ್ಲದೆ ಪ್ರತಿಭಟನೆ ಆಯೋಜಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು. ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ಆರೋಪಿಯನ್ನು ಈಗಾಗಲೇ ನಿರಪರಾಧಿ ಎಂಬುದಾಗಿ ನ್ಯಾಯಾಲಯ ಘೋಷಣೆ ಮಾಡಿತ್ತು. ಆದರೆ ಈ ಕೊಲೆಗೆ ಕಾರಣವೇನು ಎಂದು ಪತ್ತೆಹಚ್ಚುವುದಕ್ಕೆ ಆಗ್ರಹಿಸಿ ಎಪ್ರಿಲ್ 6ರಂದು ಧರ್ಮಸ್ಥಳದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ವಿವಿಧ ಸಂಘಟನೆಗಳು ಮುಂದಾಗಿದ್ದವು.
ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡದ ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ನಿರಾಕರಿಸಲಾಗದು ಎಂದು ತಿಳಿಸಿತ್ತು. ಆದರೆ ಇದೀಗ ಎಪ್ರಿಲ್ 6ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಧ್ಯಾಂತರ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.