ಹುಬ್ಬಳ್ಳಿ: ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರು ಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಆರಿಸಿ ಬಂದವ. ಆತನಿಗೆ ದಮ್ಮು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.
ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ಧ. ಕೇವಲ ಭಗವಾ ಧ್ವಜ ಮೇಲೆ ಆರಿಸಿ ಬರುತ್ತೇನೆ. ನನಗೆ ಮುಸ್ಲಿಮರ ಮತ ಬೇಡ. ವಿಜಯೇಂದ್ರಗೆ ರಾಜೀನಾಮೆ ಕೊಟ್ಟು ಆರಿಸಿ ಬರುವ ತಾಕ್ಕತ್ತು ಇದೇಯಾ ಎಂದು ಬಹಿರಂಗ ಸವಾಲು ಹಾಕಿದರು.
ವಿಜಯೇಂದ್ರಗೆ ದಮ್ಮು ಇದ್ದರೆ ನನಗೆ ನೇರವಾಗಿ ಮಾತನಾಡಲಿ. ಹಂದಿಗಳ ಕಡೆ ಮಾತನಾಡಿಸಬೇಡ. ಹಂದಿಗಳು ಹೊರಗೆ ಇರಬೇಕು. ಮನೆಯೊಳಗೆ ಕರೆದುಕೊಳ್ಳಬಾರದು. ಸ್ವಾಮಿಯಾಗಿ ಎಸ್‌ಸಿ ಸರ್ಟಿಫಿಕೇಟ್ ತಗೊಂಡಿದ್ದಾನೆ. ನಾಚಿಕೆ ಆಗಲ್ವಾ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ ತಿವಿದರು
ಎಲ್ಲಿಯವರೆಗೆ ಒಂದು ಕುಟುಂಬದಿಂದ ಬಿಜೆಪಿ ಮುಕ್ತ ಆಗುವುದಿಲ್ಲವೋ ಅಲ್ಲಿಯವರೆಗೆ ನಾನು ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಯಡಿಯೂರಪ್ಪ ಕುಟುಂಬದಿಂದ ಪಕ್ಷ ಮುಕ್ತವಾದ ಮೇಲೆ ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ. ಒಂದು ದಿನ ಎಲ್ಲರೂ ಹೋಗಲೇಬೇಕು. ಯಾವುದು ಶಾಶ್ವತವಲ್ಲ. ನಾನು ಒಳ್ಳೆಯವನು, ದುಷ್ಟರಿಗೆ ನಾನು ದುಷ್ಟ ಎಂದರು.
ನಾನೇನು ಬಿಜೆಪಿ ಬಿಟ್ಟಿಲ್ಲ. ಅವರೇ ಪೂಜ್ಯ ತಂದೆ, ಅವರ ಕಿರಿಯ ಮಗ ಸೇರಿ ಆರು ವರ್ಷ ಪಕ್ಷದಿಂದ ಹೊರಗೆ ಹಾಕಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಇವರೆಲ್ಲ ನನ್ನ ಮನೆಗೆ ಬಂದು ಆಶೀರ್ವಾದ ಮಾಡಿ ಎಂದು ಬರುತ್ತಾರೆ ಎಂದರು.
ಪಂಚಮಸಾಲಿ ಟ್ರಸ್ಟ್‌ನ ಸ್ವಯಂ ಘೋಷಿತ ಅಧ್ಯಕ್ಷ ನನ್ನ ಬಗ್ಗೆ, ಸಮಾಜದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಕೂಡಲ ಸಂಗಮದಲ್ಲಿ ಕಬಳಿಸಿರುವ ಮಠ, ದೇವಸ್ಥಾನ, ಸಮಾಜದ ಆಸ್ತಿ ಬಿಟ್ಟು ಕೊಡಲು ಹೇಳಿ ಆತನಿಗೆ ಎಂದರು.