ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.
ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮರಥೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು.ಬ್ರಹ್ಮರಥೋತ್ಸವದ ಮೊದಲು ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನ ‘ಪುತ್ತೂರು ಬೆಡಿ’ ಅದ್ದೂರಿಯಾಗಿ ನಡೆಯಿತು.ಭಕ್ತರ ಸೇವೆಯಿಂದಲೇ ಈ ಬಾರಿ ವಿಶೇಷ ಸಿಡಿಮದ್ದು ಪ್ರದರ್ಶನ ನಡೆದಿರುವುದು ವಿಶೇಷವಾಗಿತ್ತು.ಕುಂಬ್ಳೆಯ ಅಶ್ರಫ್ ಮತ್ತು ಪಾಲಕ್ಕಾಡ್‌ನ ಕುಟ್ಟನ್ ಅವರ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.
ಏ.17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ವಸಂತ ಕಟ್ಟೆಪೂಜೆ,ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.ಸಂಜೆ ದೇವರು ಒಳಾಂಗಣದಿಂದ ಹೊರಾಂಗಣಕ್ಕೆ ಪ್ರವೇಶ ಮಾಡಿದರು.ಬಳಿಕ ಶ್ರೀ ದೇವರ ಉತ್ಸವದ ಬಳಿಕ ಗಂಟೆ 8.30ಕ್ಕೆ ಕಂಡನಾಯಕ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು.ಬಳಿಕ ಶ್ರೀ ದೇವರಿಗೆ ವಾದ್ಯ, ಬ್ಯಾಂಡ್ ಸೇವೆ ನಡೆಯಿತು.ಅದಾದ ಬಳಿಕ ರಾತ್ರಿ ಗಂಟೆ 9ಕ್ಕೆ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಹೊರಾಂಗಣ ಪ್ರವೇಶವಾಯಿತು.ಈ ಸಂದರ್ಭ ಶ್ರೀ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು.ಅಲ್ಲಿಂದ ಸುಮಾರು ಗಂಟೆ 9.28ಕ್ಕೆ ರಾಜಾಂಗಣದಿಂದ ಶ್ರೀ ದೇವರು ಉಳ್ಳಾಲ್ತಿ ದೈವಗಳ ಭಂಡಾರದ ಜೊತೆ ಅಲಂಕೃತಗೊಂಡ ಭವ್ಯ ಬ್ರಹ್ಮರಥದ ಬಳಿ ತೆರಳಿದರು.ಅಲ್ಲಿ ಬ್ರಹ್ಮರಥಕ್ಕೆ ಒಂದು ಸುತ್ತು ಬಂದ ಶ್ರೀ ದೇವರು ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆಯಿತು.ಶಶಾಂಕ್ ನೆಲ್ಲಿತ್ತಾಯ ಮಧ್ಯಸ್ಥರಾಗಿ ಸಂಪ್ರದಾಯದ ನುಡಿಯನ್ನಾಡಿದರು.ಬಳಿಕ ಶ್ರೀ ದೇವರು ಬ್ರಹ್ಮರಥದ ಎದುರು ಭಕ್ತರಿಗೆ ದರುಶನ ಕರುಣಿಸಿ ಗಂಟೆ 9.55ಕ್ಕೆ ರಥಾರೂಢರಾದರು.ಇದೇ ಸಂದರ್ಭದಲ್ಲಿ ಬ್ರಹ್ಮರಥ ಪೂಜೆ ಸೇವೆ ಮಾಡಿಸಿದವರಿಗೆ ಕ್ಷೇತ್ರದ ತಂತ್ರಿಗಳು ಪೂಜಾ ಪ್ರಸಾದ ವಿತರಣೆ ಮಾಡಿದರು.ಬಳಿಕ ಪುತ್ತೂರು ಬೆಡಿ ಆರಂಭವಾಯಿತು.
10.10 ಗಂಟೆಗೆ ಸಿಡಿಮದ್ದು ಪ್ರದರ್ಶನ ಆರಂಭಗೊಂಡಿತು.ಸುಡುಮದ್ದು ಪ್ರದರ್ಶನ ನಡೆದ ಬಳಿಕ ಬ್ರಹ್ಮರಥದ ಮುಂದೆ ಶಾಸಕ ಅಶೋಕ್ ಕುಮಾರ್ ರೈ,ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ,ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ,ಮಾಜಿ ಶಾಸಕ ಸಂಜೀವ ಮಠಂದೂರು,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ.,ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೆಡೇಕರ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮಾಜಿ ಸದಸ್ಯ ಎನ್. ಕರುಣಾಕರ ರೈ ದೇರ್ಲ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸಹಿತ ಹಲವಾರು ಮಂದಿ ತೆಂಗಿನ ಕಾಯಿ ಒಡೆದರು.ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತಾಽಕಾರಿ ದೇವಪ್ಪ ಪಿ.ಆರ್.,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಗೌಡ ಒಳಗುಡ್ಡೆ,ವೆಂಕಟಕೃಷ್ಣ ಪಾಲೆಚ್ಚಾರು,ನವೀನ್ ಕರ್ಕೇರ,ನಾರಾಯಣ ಗೌಡ ಕುಕ್ಕುತ್ತಡಿ, ವಾಸುದೇವ ನಾಯ್ಕ, ಸತೀಶ್ ನಾಯ್ಕ, ಪ್ರಮೀಳಾ ಚಂದ್ರಶೇಖರ ಗೌಡ, ಲಲಿತಾಶಂಕರ ಪಾಟಾಳಿ, ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ, ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ರಾತ್ರಿ 11.28 ಗಂಟೆಗೆ ಬ್ರಹ್ಮರಥೋತ್ಸವ ನಡೆಯಿತು.ಬ್ರಹ್ಮರಥ ರಥಬೀದಿಯಲ್ಲಿ ಸಾಗಿ ಮಧ್ಯೆ ತಂತ್ರಿಗಳು ರಥದಿಂದ ಇಳಿದು ಮೂಲ ನಾಗನ ಕಟ್ಟೆಯಲ್ಲಿ ತಂತ್ರ ತೂಗಿ ಬಂದರು.ಬ್ರಹ್ಮರಥದಿಂದ ಇಳಿದ ಶ್ರೀ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಶ್ರೀ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯಾಗಿ ಕಟ್ಟೆಪೂಜೆ ನಡೆದು ಮುಂಜಾನೆ ದೇವಳದ ಒಳಗೆ ದೇವರ ಪ್ರವೇಶ, ಶಯನ ನಡೆಯಿತು.
ವರ್ಷಾವಧಿ ಜಾತ್ರೋತ್ಸವ ಆರಂಭಗೊಂಡ ದಿನದಿಂದಲೇ ಆಗಮಿಸಿದ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿತರಣೆ ನಡೆದಿದ್ದು ಲಕ್ಷಾಂತರ ಮಂದಿ ಅನ್ನದಾನ ಸ್ವೀಕರಿಸಿದ್ದಾರೆ.ಮಧ್ಯಾಹ್ನ ಊಟದ ವ್ಯವಸ್ಥೆ ಆರಂಭವಾಗಿ ಸಂಜೆ ತನಕ ನಿರಂತರ ನಡೆದಿತ್ತು. ಭಕ್ತಾದಿಗಳಿಗೆ ಅನ್ನಪ್ರಸಾದ ಸ್ವೀಕರಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೋತ್ಸವದಲ್ಲಿ ನಿತ್ಯ ಕಟ್ಟೆ ಪೂಜೆಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ಕಟ್ಟೆ ಪೂಜೆ ಸೇವೆ ಮಾಡಿಸುತ್ತಿದ್ದರು.ಏ.14ರಂದು ಸೌರಮಾನ ಯುಗಾದಿ(ವಿಷು) ಸಂದರ್ಭದಲ್ಲಿ 500ಕ್ಕೂ ಮಿಕ್ಕಿ ಕಟ್ಟೆ ಪೂಜೆ ಸೇವೆಯನ್ನು ಭಕ್ತರು ಮಾಡಿದ್ದರು.ಏ.17ರಂದು ರಾತ್ರಿ 70ಕ್ಕೂ ಅಧಿಕ ಕಟ್ಟೆಪೂಜೆ ಸೇವೆ ನಡೆಯಿತು.ಬಳಿಕ ಬ್ರಹ್ಮರಥದಲ್ಲಿ ಶ್ರೀ ದೇವರು ಆರೂಢರಾದ ಬಳಿಕ 200 ಮಂದಿ ಬ್ರಹ್ಮರಥ ಸೇವಾರ್ಥಿಗಳಿಗೆ ಸಂಕಲ್ಪ ನೆರವೇರಿಸಲಾಯಿತು.ಸುಡು ಮದ್ದು ಪ್ರದರ್ಶನದ ಬಳಿಕ ರಥ ಸ್ವಸ್ಥಾನಕ್ಕೆ ಮರಳಿದ ಬಳಿಕ ಪ್ರಸಾದ ವಿತರಣೆ ನಡೆಯಿತು.200 ಮಂದಿ ಬ್ರಹ್ಮರಥಪೂಜೆ ಸೇವೆ ಮಾಡಿದರು.ಬ್ರಹ್ಮರಥ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ರಥ ಬೀದಿಯ ಬಳಿ ನಿಲ್ಲಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಳದ ನಿತ್ಯ ಕರಸೇವಕರಲ್ಲದೆ ಸ್ವಯಂ ಪ್ರೇರಿತರಾಗಿ 500ಕ್ಕೂ ಮಿಕ್ಕಿ ಸ್ವಯಂ ಸೇವಕರು ವಾಹನ ಸಂಚಾರ ನಿಯಂತ್ರಣ, ಭಕ್ತಾದಿಗಳಿಗೆ ಮಾರ್ಗದರ್ಶನ,ಉತ್ಸವದ ಸಂದರ್ಭ ನೂಕುನುಗ್ಗಲು ನಿಯಂತ್ರಿಸಲು ಮತ್ತು ಅನ್ನಪ್ರಸಾದ ಬಡಿಸುವ ವ್ಯವಸ್ಥೆಯಲ್ಲೂ ಸಹಕರಿಸಿದರು.ವಿವಿಧ ಸಂಘ ಸಂಸ್ಥೆಗಳು ಅನ್ನಪ್ರಸಾದ ವಿತರಣೆಯಲ್ಲಿ ಸಹಕರಿಸಿದರು.ನಿತ್ಯ ಕರಸೇವಕರು ವಿವಿಧ ಜವಾಬ್ದಾರಿಯುತ ಕೆಲಸ ನಿರ್ವಹಿಸಿದರು.ಹಲವಾರು ಸಂಘ ಸಂಸ್ಥೆಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.
ಜಾತ್ರೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಜಾತ್ರಾ ಗದ್ದೆಯಲ್ಲಿ ಬ್ರಹ್ಮರಥದ ಬಳಿಯಲ್ಲೇ 10 ಅಡಿ ಎತ್ತರದಲ್ಲಿ ಪೊಲೀಸ್ ಚೌಕಿ ಮತ್ತು ಅಯ್ಯಪ್ಪ ಗುಡಿಯ ಬಳಿ ಮಾಹಿತಿ ಕೇಂದ್ರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ದೇವಳದ ವತಿಯಿಂದಲೇ ದೇವಳದ ರಾಜಗೋಪುರದ ಸೋಪಾನ ಮಂಟಪದಲ್ಲಿನ ಮಾಹಿತಿ ಕೇಂದ್ರದಲ್ಲಿ ಶಿಕ್ಷಕ ಬಾಲಕೃಷ್ಣ ಪೊರ್ದಾಲ್,ಉಪನ್ಯಾಸಕಿ ಹರಿಣಿ ಪುತ್ತೂರಾಯ,ಮಠಂತಬೆಟ್ಟು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು,ಸುರೇಶ್ ಶೆಟ್ಟಿಯವರು ಉದ್ಘೋಷಕರಾಗಿ ಭಕ್ತಾದಿಗಳಿಗೆ ವಿವಿಧ ಮಾಹಿತಿಯನ್ನು ಕ್ಷಣಕ್ಷಣಕ್ಕೂ ನೀಡುತ್ತಿದ್ದರು.ದೇವಳದ ಕಂಬಳ ಗದ್ದೆಯ ವೇದಿಕೆಯ ಬಳಿ ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಮಾಹಿತಿ ಕೇಂದ್ರ ತೆರೆಯಲಾಗಿದ್ದು ಆ ಮೂಲಕ ಭಕ್ತರಿಗೆ ವಿವಿಧ ಉಚಿತ ಮಾಹಿತಿ ನೀಡಲಾಗುತ್ತಿತ್ತು.ಪೊಲೀಸ್ ಇಲಾಖೆ ವತಿಯಿಂದ ಗದ್ದೆಯ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು.ಮಾತ್ರವಲ್ಲದೆ ದೇವಳದ ಸುತ್ತಮುತ್ತ,ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.ಜಾತ್ರಾ ಗದ್ದೆಯಲ್ಲಿಯೇ ತಾತ್ಕಾಲಿಕವಾಗಿ ಪೊಲೀಸ್ ಹೊರ ಠಾಣೆಯನ್ನು ವ್ಯವಸ್ಥೆ ಮಾಡಲಾಗಿತ್ತು.ಜತೆಗೆ ಅಗ್ನಿ ಶಾಮಕ, ಆರೋಗ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ, ನಗರಸಭೆಯ ತಾತ್ಕಾಲಿಕ ಮಾಹಿತಿ ಕೇಂದ್ರವನ್ನೂ ತೆರೆಯಲಾಗಿತ್ತು.