ಪುತ್ತೂರು: ಖ್ಯಾತ ಉದ್ಯಮಿಯಾಗಿದ್ದ ಮಾಜಿ ಡಾನ್ ಪುತ್ತೂರು ಮೂಲದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.
ಸದ್ಯ ಜರ್ಮನಿಯಲ್ಲಿರುವ ಅನುರಾಧ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅಲ್ಲಿಂದಲೇ ತಮ್ಮ ವಕೀಲರ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿಂದೆ ಮುತ್ತಪ್ಪ ರೈಯವರ ಆಪ್ತನಾಗಿದ್ದ ರಾಕೇಶ್ ಮಲ್ಲಿ ಈ ಪ್ರಕರಣದ ಒಂದನೇ ಆರೋಪಿಯಾಗಿದ್ದು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿರುವ ನಿತೀಶ್ ಶೆಟ್ಟಿ ಹಾಗೂ ವೈದ್ಯನಾಥನ್ ಮೂರು,ನಾಲ್ಕನೇ ಆರೋಪಿಗಳಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಅನುರಾಧ ಏ.14ರಂದೇ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.ಅನುರಾಧ ಬಳಸುತ್ತಿದ್ದ ಸಿಮ್‌ನ ಆಧಾರದಲ್ಲಿ ಪೊಲೀಸರು ವಿಳಾಸ ಹುಡುಕಿ ಆಕೆಗೆ ನೋಟೀಸ್ ನೀಡಲೆಂದು ಅಲ್ಲಿಗೆ ತೆರಳಿದ್ದರು.ಆದರೆ ಸಿಮ್ ಕಾರ್ಡ್‌ಗೆ ವಿಳಾಸ ನೀಡಲಾಗಿದ್ದ ಮನೆಯನ್ನು ಅನುರಾಧ ಅಮೇರಿಕ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದ ವಿಚಾರ ಈವೇಳೆ ತಿಳಿದು ಬಂದಿದೆ.ಇದು,ಮೊದಲೇ ಪ್ಲ್ಯಾನ್ ಮಾಡಿ ಅನುರಾಧ ಮನೆ ಮಾರಾಟ ಮಾಡಿದ್ದರಾ ಎಂಬ ಅನುಮಾನಕ್ಕೂ ಕಾರಣಾಗಿದೆ.
ರಿಕ್ಕಿ ರೈ ಆಪ್ತನಿಂದ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ
ರಿಕ್ಕಿ ರೈ ಅಪೇಕ್ಷೆ ಮೇರೆಗೆ, ಅವರ ಆಪ್ತರೋರ್ವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.21ರಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದ್ದಾರೆ
‘ಮಹಾಲಿಂಗೇಶ್ವರ ಕಾಪಾಡು’.. ರಿಕ್ಕಿ ರೈ ಬಾಯಲ್ಲಿ ಬಂದ ಮಾತು ‘ಮಹಾಲಿಂಗೇಶ್ವರ ಕಾಪಾಡು’..ಇದು ತನ್ನ ಮೇಲೆ ಫೈರಿಂಗ್ ಆದ ತಕ್ಷಣ ರಿಕ್ಕಿ ರೈ ಅವರ ಬಾಯಿಂದ ಬಂದ ಮಾತು.ನಿಜವಾಗಿಯೂ ಅವರನ್ನು ಕಾಪಾಡಿದ್ದು ಪುತ್ತೂರು ಮಹಾಲಿಂಗೇಶ್ವರ ಎಂದು ಅವರ ಆಪ್ತರು ಹೇಳಿಕೊಳ್ಳುತ್ತಿದ್ದಾರೆ. ಪಾತಕಿಯ ಗುಂಡು ತಾಗಿದ್ದು ರಿಕ್ಕಿ ರೈ ಅವರ ಮೂಗಿನ ತುದಿಗೆ,ಅಲ್ಲಿಂದ ಹಣೆಗೆ ಇದ್ದದು ಒಂದು ಬೆರಳಿನಷ್ಟು ಅಂತರ.ಅಲ್ಲಿಂದ ಎದೆ ಭಾಗಕ್ಕೆ ಇದ್ದದು ಕೇವಲ ಕೆಲವೇ ಇಂಚಿನ ವ್ಯತ್ಯಾಸ.ಶೂಟ್ ಮಾಡಿದಾತ ಶಾರ್ಪ್ ಪ್ರೊಫೆಷನಲ್ ಶೂಟರ್ ಎಂದು ಪೊಲೀಸರ ಮಾಹಿತಿ.ಹೀಗಿದ್ದರೂ ರಿಕ್ಕಿ ರೈಯವರನ್ನು ಆ ಮಹಾಲಿಂಗೇಶ್ವರನೇ ಕಾಪಾಡಿದ್ದು ಎನ್ನುತ್ತಾರೆ ಅವರ ಆಪ್ತ ವಲಯದವರು.
ರಿಕ್ಕಿ ರೈಯವರ ತಂದೆ ಎನ್.ಮುತ್ತಪ್ಪ ರೈಯವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತರಾಗಿದ್ದರು.ಅವರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥವನ್ನು ಸಮರ್ಪಣೆ ಮಾಡಿದ್ದರು.ಏ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆದಿತ್ತು.ಬ್ರಹ್ಮರಥೋತ್ಸವದಂದು ಮಧ್ಯಾಹ್ನ ಮುತ್ತಪ್ಪ ರೈ ಹೆಸರಿನಲ್ಲಿ ಅವರ ಕುಟುಂಬಸ್ಥರು ಪ್ರತಿ ವರ್ಷ ಅನ್ನದಾನ ಸೇವೆ ಮಾಡುತ್ತಾ ಬಂದಿರುತ್ತಾರೆ.
ಬ್ರಹ್ಮರಥೋತ್ಸದ ಮರುದಿನ ರಿಕ್ಕಿ ರೈಯವರ ಮೇಲೆ ಫೈರಿಂಗ್ ನಡೆದಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.ಮಹಾಲಿಂಗೇಶ್ವರನ ಪರಮ ಭಕ್ತರಾಗಿದ್ದು ಎಲ್ಲೇ ಹೋದರೂ ಮಹಾಲಿಂಗೇಶ್ವರನ ಸ್ಮರಣೆಯನ್ನು ತಪ್ಪದೇ ಮಾಡುತ್ತಿದ್ದ ಮುತ್ತಪ್ಪ ರೈ ಅವರ ಮಗನನ್ನು ಆ ಮಹಾಲಿಂಗೇಶ್ವರನೇ ಕಾಪಾಡಿದ್ದು ಎಂದು ನಂಬಿರುವ ಆಪ್ತ ವಲಯ ಅದೇ ಕಾರಣಕ್ಕಾಗಿ ರಿಕ್ಕಿ ರೈಯವರ ಹೆಸರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ರಿಕ್ಕಿ ರೈಯವರು ಬೇಗ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣದ ಮೊದಲ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ ಅವರನ್ನು ಮಂಗಳವಾರ ಬಿಡದಿ ಠಾಣೆಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ರಾಕೇಶ್ ಅವರು, ತಮ್ಮ ವಕೀಲರೊಂದಿಗೆ ಮಧ್ಯಾಹ್ನ ವಿಚಾರಣೆಗೆ ಹಾಜರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ನೇತೃತ್ವದಲ್ಲಿ ಡಿವೈಎಸ್ಪಿಗಳು ಮತ್ತು ಇನ್ಸ್‌ಪೆಕ್ಟರ್ ಗಳನ್ನು ಒಳಗೊಂಡ ತಂಡ ರಾಕೇಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.