ಗೋವಾ: ಪಾರ್ಟಿಗೆಂದು ಮೂವರು ಬಾಲಕಿಯರನ್ನು ಆಹ್ವಾನಿಸಿ ಸ್ನೇಹಿತರಿಂದಲೇ ಅತ್ಯಾಚಾರ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ. ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಜೂನ್ 8 ರಂದು ಈ ಘಟನೆ ನಡೆದಿದ್ದು, ಹುಡುಗಿಯರ ಪೋಷಕರು ಪೊಲೀಸರ ಬಳಿ ನಾಪತ್ತೆ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಬಾಲಕಿಯರು 11, 13 ಮತ್ತು 15 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಒಡಹುಟ್ಟಿದವರು. ಪೊಲೀಸರ ಪ್ರಕಾರ, ಹುಡುಗಿಯರು ಆರೋಪಿಗಳ ಸ್ನೇಹಿತರಾಗಿದ್ದರು ಮತ್ತು ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಿಂದ ಇವರು ಹೋಗಿದ್ದರು.
ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿದ ನಂತರ ಅದೇ ದಿನ ಕ್ಯಾಲಂಗುಟ್ ಬೀಚ್‌ನಲ್ಲಿರುವ ಹೋಟೆಲ್‌ನಿಂದ ಅವರನ್ನು ರಕ್ಷಿಸಲಾಯಿತು.ಪೊಲೀಸರು ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಲಾದ ಆರೋಪಿಗಳನ್ನು ಸಹ ಬಂಧಿಸಿದ್ದಾರೆ.
ಪೊಲೀಸರ ಬಳಿ ಬಾಲಕಿಯರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರು ಆರೋಪಿಗಳು ಹುಟ್ಟುಹಬ್ಬ ಆಚರಣೆಗೆಂದು ಕಾಯ್ದಿರಿಸಿದ ಹೋಟೆಲ್ ಕೊಠಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿಯಲ್ಲಿ ಅತ್ಯಾಚಾರ ಮತ್ತು ಅಪಹರಣದ ಆರೋಪಗಳನ್ನು ಹೊರಿಸಲಾಗಿದೆ.
ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾದ ನಂತರ ಪೊಲೀಸರು ಹೋಟೆಲ್ ಮಾಲೀಕರನ್ನು ಬಂಧಿಸಿದ್ದಾರೆ. ಮತ್ತು ಪೋಷಕರ ಅನುಪಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ಕೊಠಡಿಗಳನ್ನು ಹೇಗೆ ನೀಡಲಾಯಿತು ಎಂದು ಪ್ರಶ್ನಿಸಿದರು.