ಪುತ್ತೂರು: ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಮಗುವಿಗೆ ಜನ್ಮ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡರ ಸಹಿತ ಯಾರೂ ಮಾತನಾಡುತ್ತಿಲ್ಲ. ಈ ಪ್ರಕರಣವನ್ನು ಸಮಾಜ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಪ್ರಕರಣವನ್ನು ಏನೂ ಅಲ್ಲ ಎಂದು ಬಿಂಬಿಸಲಾಗುತ್ತಿದೆ ಎಂದು ನಗರ ಕಾಂಗ್ರೆಸ್‌ಮುಖಂಡ ಹೆಚ್.ಮಹಮ್ಮದಾಲಿ ಆರೋಪಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ಯಾರೆಲ್ಲಾ ಮಾತುಕತೆಗೆ ಪ್ರಯತ್ನಿಸಿದರೋ ಅವರಿಗೆ ಶಾಪ ತಟ್ಟಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ವಿಚಾರಕ್ಕೆ ಸಂಬಂಧಿಸಿ ಹಿಂದುತ್ವದ ಬಗ್ಗೆ ಮಾತನಾಡುವ ಮುಖಂಡರು ಈಗ ಎಲ್ಲಿ ಅಡಗಿಕುಳಿತಿದ್ದಾರೆ ಎಂದು ಪ್ರಶ್ನಿಸಿದ ಅವರು, ಓರ್ವ ಹಿಂದೂ ಹೆಣ್ಣು ಮಗಳಿಗೆ ಅನ್ಯಾಯವಾದರೂ ಯಾವ ಹಿಂದೂ ಮುಖಂಡ, ಬಿಜೆಪಿಗರು ಧ್ವನಿ ಎತ್ತಿಲ್ಲ, ಅದೇ ಈ ಪ್ರಕರಣದಲ್ಲಿ ಮುಸ್ಲಿಂ ಆರೋಪಿಯಾಗಿದ್ದರೆ ಇಡೀ ಪುತ್ತೂರಿಗೆ ಬೆಂಕಿ ಕೊಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ಯಾವುದೇ ಪ್ರಕರಣ ನಡೆದರೂ ಮುಂಚೂಣಿಯಲ್ಲಿರುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಈಗ ಎಲ್ಲಿ ಹೋಗಿದ್ದಾರೆ. ಈ ಪ್ರಕರಣದಲ್ಲಿ ಯಾರೆಲ್ಲಾ ಮಧ್ಯಸ್ತಿಗೆ ವಹಿಸಲು ಹೋಗಿದ್ದಾರೋ ಅವರೆಲ್ಲರ ಹೆಸರು ಬಹಿರಂಗವಾಗಬೇಕು, ಮಗ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದರೂ, ಆತನ ಅಪ್ಪ ಆರಾಮವಾಗಿ ತಿರುಗಾಡುತ್ತಿದ್ದಾನೆ.
ಯುವತಿಗೆ ಆರೋಪಿ ಆತನ ಮನೆಯಲ್ಲೇ ಅತ್ಯಾಚಾರ ನಡೆಸಿದ್ದು, ಈ ನೆಲೆಯಲ್ಲಿ ಆರೋಪಿಯ ಅಪ್ಪನನ್ನೂ ಬಂಧಿಸಬೇಕು, ಪೋಲಿಸರು ಆರೋಪಿಯ ಮನೆಯಲ್ಲೂ ತನಿಖೆ ನಡೆಸಬೇಕು. ಈ ಪ್ರಕರಣ ಮಾತ್ರವಲ್ಲದೆ ಆ ಮನೆಯಲ್ಲಿ ಬೇರೆ ಪ್ರಕರಣಗಳು ನಡೆದಿದೆಯೋ ಅನ್ನೋದನ್ನೂ ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೌರಿಸ್‌ಮಸ್ಕರೇನಸ್, ಸುರೇಶ್‌ಪೂಜಾರಿ, ಹರೀಶ್‌ಆಚಾರ್ಯ, ರಶೀದ್ ಮರ ಉಪಸ್ಥಿತರಿದ್ದರು.
























