ನವದೆಹಲಿ, ಜುಲೈ 02: ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ L K ಅಡ್ವಾಣಿ ಮೇಲೆ ಬಾಂಬ್ ದಾಳಿ ಸಂಚು ರೂಪಿಸಿದ್ದ ಉಗ್ರ ಅಬೂಬಕರ್ನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. 2011ರಲ್ಲಿ ತಮಿಳುನಾಡಿನ ಮಧುರೈನಲ್ಲಿ ನಡೆದ ರಥಯಾತ್ರೆ ಸಂದರ್ಭದಲ್ಲಿ ಅಡ್ವಾಣಿಯವರನ್ನು ಗುರಿಯಾಗಿಸಿಕೊಂಡು ಪೈಪ್ ಬಾಂಬ್ ಇಡಲು ಪ್ರಯತ್ನಿಸಲಾಗಿತ್ತು.
ಈ ಪಿತೂರಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನನ್ನು ಸುಮಾರು 30 ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. ಎಲ್.ಕೆ. ಅಡ್ವಾಣಿ ಅವರನ್ನು ಗುರಿಯಾಗಿಸಿಕೊಂಡು ಪೈಪ್ ಬಾಂಬ್ ಇಡುವ ಸಂಚಿನಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಅಬೂಬಕರ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಮಂಗಳವಾರ ಭಯೋತ್ಪಾದಕನ ಬಂಧನದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಬೂಬಕರ್ ಸಿದ್ದಿಕಿಯನ್ನು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಆತನ ಅಡಗುತಾಣದಿಂದ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ನೆರವಿನೊಂದಿಗೆ ಆತನನ್ನು ಬಂಧಿಸಲಾಗಿದೆ. ಅಬೂಬಕರ್ ಜೊತೆಗೆ, ಮತ್ತೊಬ್ಬ ಪರಾರಿಯಾಗಿರುವ ಮೊಹಮ್ಮದ್ ಅಲಿ ಅಲಿಯಾಸ್ ಯೂನಸ್ ಅಲಿಯಾಸ್ ಮನ್ಸೂರ್ ನನ್ನು ಕೂಡ ಬಂಧಿಸಲಾಗಿದೆ.
ಉಗ್ರ ಅಬೂಬಕರ್ ಸಿದ್ದಿಕಿ ದಕ್ಷಿಣ ಭಾರತದಲ್ಲಿ ನಡೆದ ಅನೇಕ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದ.ಪೊಲೀಸರು ಕಳೆದ 3 ದಶಕಗಳಿಂದ ಅಂದರೆ ಸುಮಾರು 30 ವರ್ಷಗಳಿಂದ ಭಯೋತ್ಪಾದಕನಿಗಾಗಿ ಹುಡುಕುತ್ತಿದ್ದರು.
ಭಯೋತ್ಪಾದಕ ಅಬೂಬಕರ್ ಮೇಲೆ ಪೊಲೀಸರು 5 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. ಆತ ಅನೇಕ ಬಾಂಬ್ ಸ್ಫೋಟಗಳು ಮತ್ತು ಕೋಮು ಹತ್ಯೆಗಳಲ್ಲಿ ಭಾಗಿಯಾಗಿದ್ದ ಮತ್ತು ಮೂರು ದಶಕಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ.
ಮಾಹಿತಿಯ ಪ್ರಕಾರ, ಭಯೋತ್ಪಾದಕ ಅಬೂಬಕರ್ 1995 ರಲ್ಲಿ ಚಿಂತಾದ್ರಿಪೇಟೆಯಲ್ಲಿರುವ ಹಿಂದೂ ಮುನ್ನಾನಿಯ ಕಚೇರಿಯಲ್ಲಿ ನಡೆದ ಬಾಂಬ್ ಸ್ಫೋಟ, 1995 ರಲ್ಲಿ ಹಿಂದೂ ಕಾರ್ಯಕರ್ತ ಟಿ ಮುತ್ತುಕೃಷ್ಣನ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಪಾರ್ಸೆಲ್ ಬಾಂಬ್ ಸ್ಫೋಟ, 1999 ರಲ್ಲಿ ಎಗ್ಮೋರ್‌ನ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿ ಮತ್ತು ತಿರುಚಿರಾಪಳ್ಳಿ, ಕೊಯಮತ್ತೂರು ಮತ್ತು ಕೇರಳ ಸೇರಿದಂತೆ ಆರು ಇತರ ಸ್ಥಳಗಳಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ. 2011 ರಲ್ಲಿ ತಮಿಳುನಾಡಿನ ಮಧುರೈನಲ್ಲಿ ಅವರ ರಥಯಾತ್ರೆಯ ಸಮಯದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಗುರಿಯಾಗಿಸಿಕೊಂಡು ಪೈಪ್ ಬಾಂಬ್ ಇಡುವ ಪ್ರಯತ್ನದಲ್ಲಿ ಭಯೋತ್ಪಾದಕ ಭಾಗಿಯಾಗಿದ್ದ ಎನ್ನಲಾಗಿದೆ.