ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ ಅಬ್ದುಲ್ ರೆಹಮಾನ್ ಕಲ್ಕಂದೂರು ಎಂಬಾತನನ್ನು ಎನ್. ಐ.ಎ. ಅಧಿಕಾರಿಗಳು ಕೇರಳದ ವಿಮಾನ ನಿಲ್ದಾಣದಲ್ಲಿ ಬಂಧಿಸಿದಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ವಿದೇಶಕ್ಕೆ ತೆರಳಿ ಕತಾರ್ ನ ದೋಹಾದಲ್ಲಿ ತಲೆಮರೆಸಿಕೊಂಡಿದ್ದ ಎಲ್ಲಾ ಆರೋಪಿಗಳಿಗಾಗಿ ಲುಕ್ ಔಟ್ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಅಬ್ದುಲ್ ರೆಹಮಾನ್ ಕಲ್ಕಂದೂರ್ ಹಾಗೂ ತಲೆಮರೆಸಿಕೊಂಡಿರುವ ಇತರರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನು ಕೂಡ ರಾಜ್ಯ ಗೃಹ ಇಲಾಖೆ ಘೋಷಿಸಿತ್ತು.
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೆ ಎನ್‌ಐಎ 21 ಆರೋಪಿಗಳನ್ನು ಬಂಧಿಸಿದ್ದು, ಇದೀಗ ಇನ್ನೋರ್ವ ಪ್ರಮುಖ ಆರೋಪಿ ಅಬ್ದುಲ್ ರೇಹಮಾನ್ ನನ್ನು ಬಂಧಿಸಿದೆ.
ಅಬ್ದುಲ್ ರೆಹಮಾನ್ ನಿಷೇಧಿತ ಪಿಎಫೈ ಸಂಘಟನೆಯ ಕಾರ್ಯದರ್ಶಿಯಾಗಿದ್ದ. ರೆಹಮಾನನ್ನು ವಶಕ್ಕೆ ಪಡೆದಿರುವ ಎನ್ ಐ ಎ ಅಧಿಕಾರಿಗಳು ಬೆಂಗಳೂರಿನ ಎನ್ ಐ ಎ ನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ನೆಟ್ಟಾರು ಅವರನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ತಲೆರೆಸಿಕೊಂಡಿದ್ದ ಆರೋಪಿ ಅಬ್ದುಲ್ ರೆಹಮಾನ್‌ನನ್ನು ಎನ್‌ಐಎ ಬಂಧಿಸಿದೆ. ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 28 ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಸಿದೆ