ರಾಜ್ಯದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಯುವಕರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಗಳು ವರದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿನ ಹೃದಯಾಘಾತ ಸಾವುಗಳು ಸಂಭವಿಸಿವೆ ಎಂಬ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಆರು ತಿಂಗಳಲ್ಲಿ 85 ಮಂದಿ ಹೃದಯಾಘಾತದಿಂದ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್‌ಆರ್ ತಿಮ್ಮಯ್ಯ ಅವರ ಪ್ರಕಾರ, ಜನವರಿ 2025 ರಿಂದ ಜೂನ್ 2025 ರವರೆಗೆ ಜಿಲ್ಲೆಯಲ್ಲಿ 380 ಜನರಿಗೆ ಹೃದಯಾಘಾತವಾಗಿದ್ದು, ಇದರಲ್ಲಿ 85 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ 54 ಪುರುಷರು ಮತ್ತು 31 ಮಹಿಳೆಯರು ಸೇರಿದ್ದಾರೆ.
40 ರಿಂದ 50 ವರ್ಷ ಒಳಗಿನ 18 ಮಂದಿ, 50 ರಿಂದ 60 ವರ್ಷ ಒಳಗಿನ 18 ಮಂದಿ ಹಾಗೂ 60 ವರ್ಷ ಮೇಲ್ಪಟ್ಟ 45 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಲ್ಲಿ ತಿಳಿಸಿದ್ದಾರೆ. 20 ರಿಂದ 40 ವರ್ಷ ವಯಸ್ಸಿನ 4 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.