ಪುತ್ತೂರು: ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಕೋಡಿಯಾಡಿ ಗುತ್ತಿನ ಮನೆಯ ಮೊಮ್ಮಗಳು ತ್ರಿಶಾ ಜೈನ್ ಕಾಂತಾರ- 1 ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇರಿಸಿದ್ದಾರೆ.
ಕೋಡಿಯಾಡಿ ಮನೆಯ ವಾರಿಸೇನ ಜೈನ್ ಮತ್ತು ಮಾಲಿನಿ ದಂಪತಿಯ ಪುತ್ರಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮದ ಅನುಶ್ರೀ ಸತೀಶ್ ಜೈನ್ ಅವರ ಮಗಳು ತ್ರಿಶಾ ಜೈನ್ ಕಾಂತಾರ- 1 ಚಿತ್ರದಲ್ಲಿ ನಟನೆಯ ಅವಕಾಶ ಗಿಟ್ಟಿಸಿಕೊಂಡ ಬೆಡಗಿ.
ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಮತ್ತು ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಬಹು ನಿರೀಕ್ಷಿತ ಕಾಂತಾರ -1 ಚಿತ್ರದ ಚಿತ್ರೀಕರಣ ಕಳೆದ ಜೂ.10ರಿಂದ 30ರವರೆಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ಮಾಸ್ತಿಕಟ್ಟೆ ಬಳಿ ನಿರ್ಮಿಸಿದ್ದ ಬೃಹತ್ ಸೆಟ್ ನಲ್ಲಿ ನಡೆದಿತ್ತು. ಈ ವೇಳೆ ತ್ರಿಶಾ ಜೈನ್ 20 ದಿನಗಳ ಕಾಲ ನಟಿಸಿದ್ದಾರೆ. ಚಿತ್ರ ಆಕ್ಟೊಬರ್ 2ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದ ಕಾಂತಾರ ಸಿನಿಮಾ ಈಗಾಗಲೇ ಕ್ರಾಂತಿ ಎಬ್ಬಿಸಿದೆ. ಅದರ ಮುಂದುವರಿದ ಭಾಗವಾಗಿ ಬಿಡುಗಡೆಗೊಳ್ಳಲಿರುವ ಕಾಂತಾರ-1ರಲ್ಲಿ ಕೋಡಿಂಬಾಡಿಯ ಕೋಡಿಯಾಡಿ ಗುತ್ತಿನ ಹುಡುಗಿ ಅವಕಾಶ ಪಡೆದಿದ್ದಾರೆ.
ಇದಲ್ಲದೆ ಜುಲೈ 26ರಿಂದ 29ರವರೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಚಿತ್ರೀಕರಣ ನಡೆಯಲಿರುವ ನಟ ಜಗ್ಗೇಶ್ ಅವರ ಸಹೋದರ ಕೋಮಲ್ ಅವರ ಚಿತ್ರದ ಪಾತ್ರಕ್ಕೂ ತ್ರಿಶಾ ಜೈನ್ ಆಯ್ಕೆಯಾಗಿದ್ದಾರೆ. ಪತ್ರಕರ್ತರಾಗಿರುವ ಸತೀಶ್ ಜೈನ್ ಅವರ ಪುತ್ರಿ ತ್ರಿಶಾ ಜೈನ್ ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತ್ರಿಶಾ ಜೈನ್ ಅವರ ಅಜ್ಜ ವಾರಿಸೇನ ಜೈನ್ ಅವರು ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.