ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ ಜಿಲ್ಲೆಯಲ್ಲಿನ ಮರಳು ಕೊರತೆ ಹಾಗೂ ಕೆಂಪುಕಲ್ಲು ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಯು ಜು.14ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಕೇಂದ್ರಸ್ಥಾನದಲ್ಲಿ ಪ್ರತಿಭಟನೆ ನಡೆಸಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲೆಯಲ್ಲಿ ಮನೆ ಸಹಿತ ಇತರ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕೆಂಪುಕಲ್ಲು, ಮರಳು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಕೆಂಪುಕಲ್ಲು , ಮರಳು ಸಾಗಾಟ ಮಾಡುವವರು, ಸಾವಿರಾರು ಮಂದಿ ಕಾರ್ಮಿಕರು, ಮೇಸಿŒಗಳು, ಕಟ್ಟಡ ಕಾರ್ಮಿಕರು ಕೆಲಸ ಇಲ್ಲದಂತಾಗಿದೆ. ಹಾಗಾಗಿ ಕೆಂಪುಕಲ್ಲು, ಮರಳು ಪೂರೈಕೆ ಮಾಡುವವರು, ಕಾರ್ಮಿಕರು ಬೆಂಬಲಿಸಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದರು.
ಕೆಂಪುಕಲ್ಲು, ಮರಳು ಅಕ್ರಮಕ್ಕೆ ನಮ್ಮ ಬೆಂಬಲವಿಲ್ಲ. ಅಧಿಕೃತ ಪೂರೈಕೆಗೆ ಅವಕಾಶ ನೀಡಬೇಕು. ಜನರಿಗೆ ಸಾಮಾನ್ಯ ದರದಲ್ಲಿ ಕಲ್ಲು, ಮರಳು ಸಿಗುವಂತೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಈ ಸಂಬಂಧ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಯಾವುದೇ ಸಭೆ ನಡೆಸಿಲ್ಲ ಎಂದ ಅವರು, ನಮ್ಮಲ್ಲಿ ಕೆಂಪುಕಲ್ಲಿಗೆ ರಾಜಧನ ಹೆಚ್ಚಿರುವ ಕಾರಣ ಅಧಿಕೃತ ಪರವಾನಿಗೆಗಿಂತ ಅನಧಿಕೃತ ಹೆಚ್ಚಾಗಿದೆ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಹರೀಶ್ ಪೂಂಜ, ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.