75 ವರ್ಷಕ್ಕೆ ರಾಜಕೀಯ ನಿವೃತ್ತಿ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.
ಸ್ವಾರಸ್ಯವೆಂದರೆ ಇದೇ ಸೆಪ್ಟೆಂಬರ್ 11 ರಂದು ಮೋಹನ್ ಭಾಗವತ್ ಅವರು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ 75 ನೇ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಆರ್‌ಎಸ್‌ಎಸ್ ಚಿಂತಕ ಮೊರೋಪಂತ್ ಪಿಂಗಳೆ ಅವರ ಸ್ಮರಣಾರ್ಥ ನಾಗ್ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, 75 ನೇ ವರ್ಷಕ್ಕೆ ಕಾಲಿಡುವುದು ಪ್ರಕೃತಿಯು ವಿರಾಮ ತೆಗೆದುಕೊಂಡು ಇತರರಿಗೆ ದಾರಿ ಮಾಡಿಕೊಡುವ ಸಂಕೇತವಾಗಿದೆ ಎಂದು ಹೇಳಿದರು.
75 ವರ್ಷದ ನಂತರ ಶಾಲು ಹೊದಿಸಿ ಸನ್ಮಾನಿಸಲಾಗುತ್ತಿರುವುದು ಸಮಾಜವು ನಿವೃತ್ತಿ ಹೊಂದಲು ಮತ್ತು ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಲು ಸಜ್ಜಾಗಿರುವ ಸಮಯ ಎಂದು ಒಮ್ಮೆ ತಮಾಷೆ ಮಾಡಿದ್ದ ಪಿಂಗಳೆ ಅವರ ಹಾಸ್ಯಮಯ ಕ್ಷಣವನ್ನು ಅವರು ನೆನಪಿಸಿಕೊಂಡರು ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪಿಂಗಳೆ ಅವರು ರಾಷ್ಟ್ರೀಯ ಸೇವೆಗೆ ಸಮರ್ಥವಾಗಿ ಬದ್ಧರಾಗಿದ್ದರೂ, ವಯಸ್ಸು ಆದ ನಂತರ ಸೊಗಸಾಗಿ ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ಭಾಗವತ್ ಒತ್ತಿ ಹೇಳಿದರು.
ಮೋಹನ್ ಭಾಗವತ್ ಅವರ ಈ ಹೇಳಿಕೆ, ಬಿಜೆಪಿಯಲ್ಲಿ 75 ವರ್ಷಕ್ಕೆ ಅಧಿಕಾರದಿಂದ ನಿವೃತ್ತಿ ಪ್ರಧಾನಿ ಮೋದಿಯವರ ಬಗ್ಗೆ ಸೂಕ್ಷ್ಮವಾಗಿ ಹೇಳಿರುವುದು ಎಂದು ವ್ಯಾಪಕವಾಗಿ ಅರ್ಥೈಸಲಾಗಿದೆ, ಇದಕ್ಕೆ ವಿರೋಧ ಪಕ್ಷದ ನಾಯಕರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಸೇನೆ (UBT) ಸಂಸದ ಸಂಜಯ್ ರಾವತ್, “ಮೋದಿ ಅವರು ಎಲ್‌ಕೆ ಅಡ್ವಾಣಿ, ಜಸ್ವಂತ್ ಸಿಂಗ್ ಮತ್ತು ಮುರಳಿ ಮನೋಹರ್ ಜೋಶಿಯಂತಹ ಹಿರಿಯ ನಾಯಕರನ್ನು 75 ರ ನಂತರ ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದರು. ಅವರು ಅದೇ ಮಾನದಂಡಕ್ಕೆ ಬದ್ಧರಾಗುತ್ತಾರೆಯೇ ಎಂದು ನೋಡೋಣ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ಬೇರೆಯವರಿಗೆ ಬೋಧಿಸುವ ಮುನ್ನ ತಾವು ಅಭ್ಯಾಸ ಮಾಡಬೇಕು, ಬಿಜೆಪಿಯ ಮಾರ್ಗದರ್ಶಕ ಮಂಡಲವನ್ನು 75 ವರ್ಷಗಳ ಆಳ್ವಿಕೆಯ ಆಧಾರದ ಮೇಲೆ ನಿವೃತ್ತಿ ಹೊಂದಲು ರಚಿಸಲಾಯಿತು, ಆದರೆ ಪ್ರಸ್ತುತ ನಾಯಕತ್ವ ಸ್ವತಃ ಅಪವಾದವನ್ನು ಮಾಡುತ್ತಿರುವಂತೆ ತೋರುತ್ತಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 2023 ರಲ್ಲಿ ಈ ಬಗ್ಗೆ ಮಾತನಾಡಿದ್ದರು. ಬಿಜೆಪಿಯ ಸಂವಿಧಾನದಲ್ಲಿ ಅಂತಹ ವಯಸ್ಸಿಗೆ ಸಂಬಂಧಿಸಿದ ನಿವೃತ್ತಿ ನೀತಿಗಳಿಲ್ಲ. ಮೋದಿಯವರು 2029 ರವರೆಗೆ ಅಧಿಕಾರದಲ್ಲಿರುತ್ತಾರೆ. ಇಂಡಿಯಾ ಮೈತ್ರಿಕೂಟ ಆಧಾರರಹಿತ ವದಂತಿಗಳಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದರು.