ಪುತ್ತೂರು : ದಾಖಲಾತಿ ಕೊರತೆಯಿಂದ ಭಣಗುಡುತ್ತಿರುವ ಸರಕಾರಿ ಪದವಿ ಕಾಲೇಜುಗಳ ನಡು ವೆಯೇ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಈ ಬಾರಿ ಈ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪದವಿ ತರಗತಿಗಳಿಗೆ ಹೊಸದಾಗಿ 100 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಕಾಲೇಜಿನ ಈ ವರ್ಷದ ವಿದ್ಯಾರ್ಥಿ ಬಲ 122ಕ್ಕೇರಿದೆ. ಕಳೆದ ವರ್ಷ 40 ವಿದ್ಯಾರ್ಥಿಗಳಿದ್ದರು.
ವಿದ್ಯಾರ್ಥಿ ಕೊರತೆಯಿಂದ ಸರಕಾರಿ ಪದವಿ ಕಾಲೇಜು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇರಿಸಿತ್ತು. ಇದಕ್ಕಾಗಿ ಆಯ್ದುಕೊಂಡ ದಾರಿ ಒಂದೆಡೆ ಉಚಿತ ಶಿಕ್ಷಣ, ಇನ್ನೊಂದೆಡೆ ಉಚಿತ ಭೋಜನ. ನಗರದಿಂದ ಐದು ಕಿ.ಮೀ. ದೂರದಲ್ಲಿರುವ ಕಾಲೇಜಿನ ಪ್ರಯೋಗ ನಿರೀಕ್ಷಿತ ಯಶಸ್ಸು ಕಂಡಿದೆ. ಪುತ್ತೂರು ನಗರದಲ್ಲಿದ್ದಾಗ ವಿಜೃಂಭಿಸಿದ್ದ ಕಾಲೇಜು ಗ್ರಾಮಾಂತರದ ಜಿಡೆಕಲ್ಲಿಗೆ ಸ್ಥಳಾಂತರಗೊಂಡ ಆರು ವರ್ಷಗಳ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶತಕ ಮೀರಿ ಮುನ್ನಡೆದಿದೆ.
ಪುತ್ತೂರು ನಗರಕ್ಕೆ ಮೊದಲ ಸರಕಾರಿ ಪ್ರಥಮ ದರ್ಜೆ ಕಾಲೇಜು 2007ರಲ್ಲಿ ಮಂಜೂರಾಯಿತು. ನಗರದೊಳಗಿನ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದಲ್ಲಿ ಮೊದಲ 2 ವರ್ಷಗಳ ಕಾರ್ಯನಿರ್ವಹಿಸಿತ್ತು. 2009 ರಲ್ಲಿ ನಗರದಿಂದ ಐದು ಕಿ.ಮೀ. ದೂರದಲ್ಲಿ ಇರುವ ಜಿಡೆಕಲ್ಲಿಗೆ ಸ್ಥಳಾಂತರಗೊಂಡು ಸ್ವಂತ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಿತ್ತು. 480ರಿಂದ 500 ತನಕ ವಿದ್ಯಾರ್ಥಿ ಸಂಖ್ಯೆ ಹೊಂದಿದ್ದ ಈ ಕಾಲೇಜು ನಗರದಿಂದ ಹೊರವಲಯಕ್ಕೆ ಬಂದ ಕಾರಣ ದಾಖಲಾತಿ ಸಂಖ್ಯೆ ಕ್ಷೀಣಿಸಿತ್ತು. ಕಳೆದ ವರ್ಷ ಬಿ.ಎ, ಬಿ.ಕಾಂ. ವಿಭಾಗದ ಒಟ್ಟು ಸಂಖ್ಯೆ 40ಕ್ಕೆ ಕುಸಿದಿತ್ತು. ಬಿಸಿಎ ಪ್ರಾರಂಭಕ್ಕೆ ಅನುಮತಿ ಇದ್ದರೂ ದಾಖಲಾತಿ ಇರಲಿಲ್ಲ. ಈ ಬಾರಿ ಹಲವು ಪ್ರಯೋಗಗಳ ಪರಿಣಾಮ 40ರಲ್ಲಿದ್ದ ಸಂಖ್ಯೆ 122ಕ್ಕೆ ಏರಿಕೆ ಕಂಡಿದೆ. ಕಳೆದ ಆರು ವರ್ಷದ ನಂತರ ಕಾಲೇಜಿನ ಒಟ್ಟು ಸಂಖ್ಯೆ 100 ದಾಟಿದೆ.
2024-25ರಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಒಟ್ಟು ಸಂಖ್ಯಾ ಬಲ 40. ಇದರಲ್ಲಿ 16 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ನಿರ್ಗಮಿಸಿದ್ದು ಕೊನೆಗೆ ಉಳಿದದ್ದು 22 ಮಂದಿ ಮಾತ್ರ. ಬಿಎ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ. ತೃತೀಯ ವರ್ಷದಲ್ಲಿ ವಿದ್ಯಾರ್ಥಿಗಳು ಇದ್ದರೆ, ಬಿಕಾಂನಲ್ಲಿ ಪ್ರಥಮ ಮತ್ತು ತೃತೀಯ ವರ್ಷ ತರಗತಿಯಲ್ಲಿ ವಿದ್ಯಾರ್ಥಿಗಳಿದ್ದರೆ ದ್ವಿತೀಯ ಬಿಕಾಂನಲ್ಲಿ ವಿದ್ಯಾರ್ಥಿ ಸಂಖ್ಯೆ ಶೂನ್ಯವಾಗಿತ್ತು. ಈ ಬಾರಿ ಪ್ರಥಮ ಬಿಎಗೆ 31, ಪ್ರಥಮ ಬಿಕಾಂಗೆ 39, ಪ್ರಥಮ ಬಿಸಿಎಗೆ 30 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.
ವಿದ್ಯಾರ್ಥಿ ಸಂಖ್ಯೆ ಹೆಚ್ಚಳಕ್ಕೆ ಈ ಕಾಲೇಜು 100 ಮಂದಿಗೆ ಉಚಿತ ಶಿಕ್ಷಣ ನೀಡುವ ಘೋಷಣೆ ಮಾಡಿತ್ತು. ಇದನ್ನು ರೋಟರಿ ಸಂಸ್ಥೆಗಳು, ಶಿಕ್ಷಣಾಕಾಂಕ್ಷಿಗಳ ಮೂಲಕ ಭರಿಸಲು ನಿರ್ಧರಿಸಲಾಗಿತ್ತು. ಇದು ಫಲ ನೀಡಿದ್ದು ಉಚಿತ ಶಿಕ್ಷಣದ 100 ಸ್ಥಾನವೂ ಭರ್ತಿ ಆಗಿದೆ. ಇಲ್ಲಿ ಹೊಸದಾಗಿ ದಾಖಲಾಗುವ ವಿದ್ಯಾರ್ಥಿನಿಯರಿಗೆ 5746 ಪ್ರವೇಶ ಶುಲ್ಕ ಇದ್ದು ಇದರಲ್ಲಿ 746 ವಿದ್ಯಾರ್ಥಿನಿ ಭರಿಸಿದರೆ ಉಳಿದ 5000 ಮೊತ್ತ ದಾನಿಗಳು ಭರಿಸಿದ್ದಾರೆ. ವಿದ್ಯಾರ್ಥಿಗಳಿಗೆ 6746 ಪ್ರವೇಶ ಶುಲ್ಕವಾದರೆ ಇದರಲ್ಲಿ 1746 ಅನ್ನು ವಿದ್ಯಾರ್ಥಿ ಭರಿಸಿದ್ದು ಉಳಿದ ಹಣವನ್ನು ದಾನಿಗಳು ನೀಡಿದ್ದಾರೆ. ಅಂದರೆ 100 ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಮೊತ್ತವನ್ನು ದಾನದ ರೂಪದಲ್ಲಿ ಸಂಗ್ರಹಿಸಲಾಗಿದೆ. ಇನ್ನೊಂದೆಡೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಅವರು ನೇತೃತ್ವದಲ್ಲಿ ಮಧ್ಯಾಹ್ನ ಉಚಿತ ಭೋಜನದ ವ್ಯವಸ್ಥೆ ಮಾಡಿದ್ದು ಕಳೆದ ಶೈಕ್ಷಣಿಕ ಅವಧಿಯ ಕೊನೆಯಲ್ಲಿಯೇ ಇದಕ್ಕೆ ಚಾಲನೆ ನೀಡಲಾಗಿತ್ತು. ಅಕ್ಕಿ, ಪಾತ್ರೆ, ಗ್ಯಾಸ್ ಸ್ಟವ್ ಹೀಗೆ ಎಲ್ಲವೂ ದಾನಿಗಳ ಮೂಲಕ ಲಭ್ಯವಾಗಿದ್ದು ವಿದ್ಯಾರ್ಥಿಗಳು, ಉಪಾನ್ಯಾಸಕರೇ ಅಡುಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಉಚಿತ ಶಿಕ್ಷಣದ ಜತೆಗೆ ಮಧ್ಯಾಹ್ನ ಉಚಿತ ಭೋಜನ ನೀಡುವ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. 40ರಲ್ಲಿದ್ದ ವಿದ್ಯಾರ್ಥಿ ಸಂಖ್ಯೆ 122ಕ್ಕೆ ಏರಿಕೆ ಕಂಡಿದೆ. ಇದರಲ್ಲಿ 22 ಮಂದಿ ಹಾಲಿ ವಿದ್ಯಾರ್ಥಿಗಳಿದ್ದು, 100 ಮಂದಿ ಹೊಸದಾಗಿ ದಾಖಲಾತಿ ಆಗಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ದಾಖಲಾತಿ ಬಗ್ಗೆ ವಿಚಾರಿಸಿದ್ದಾರೆ. ಉಚಿತ ಶಿಕ್ಷಣದ 100 ವಿದ್ಯಾರ್ಥಿ ಗುರಿ ಪೂರ್ಣಗೊಂಡಿದ್ದರೂ ಇನ್ನೂ ಕೂಡ ದಾಖಲಾಗುವ ವಿದ್ಯಾರ್ಥಿಗಳ ಶುಲ್ಕ ಭರಿಸುವ ಬಗ್ಗೆ ದಾನಿಗಳ ಮೂಲಕ ಪ್ರಯತ್ನ ಮುಂದುವರಿಸಲಾಗುವುದು.
























