ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಒತ್ತುವಾರಿಯಲ್ಲಿದ್ದ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಹಿಂತಿರುಗಿಸಿಕೊಳ್ಳುವ ಕಾರ್ಯ ಪುನರಾರಂಭವಾಗಿದೆ. ಜುಲೈ 17ರಂದು ದೇವಳದ ತೆಂಕಿಲದ 3 ಕಡೆಗಳಲ್ಲಿ ಒಟ್ಟು 1 ಎಕರೆಗೂ ಮಿಕ್ಕಿ ಜಾಗವನ್ನು ದೇವಸ್ಥಾನದ ಸುಪರ್ದಿಗೆ ಪಡೆಯಲಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಈಶ್ವರ ಭಟ್ ಪಂಜಿಗುಡ್ಡೆ ಅವರು, “ಶಾಸಕ ಅಶೋಕ್ ರೈ ಅವರ ಮಾರ್ಗದರ್ಶನದಂತೆ ದೇವಳದ ಅಭಿವೃದ್ಧಿ ಹಾಗೂ ಜಾಗ ಸ್ವಾಧೀನ ಕಾರ್ಯಗಳನ್ನ ನಡೆಸಲಾಗುತ್ತಿದೆ. ಈಗಾಗಲೇ ರೂ.25 ಕೋಟಿಯಷ್ಟು ಮೌಲ್ಯದ ಜಾಗವನ್ನು ದೇವಳದ ಹೆಸರಿನಲ್ಲಿ ಹಿಂತಿರುಗಿಸಿಕೊಳ್ಳಲಾಗಿದೆ. ಕಳೆದ ಕೆಲವು ಸಮಯ ಈ ಕಾರ್ಯ ವಿಳಂಬವಾಗಿದ್ದರೂ ಈಗ ನಾವು ಸೌಹಾರ್ದಯುತವಾಗಿ ಈ ಕೆಲಸವನ್ನು ಮುಂದುವರಿಸುತ್ತಿದ್ದೇವೆ,” ಎಂದು ತಿಳಿಸಿದರು.
ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಸುವರ್ಣ, ಮಾಜಿ ಸಮಿತಿ ಸದಸ್ಯ ರಾಮದಾಸ್ ಗೌಡ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕುಂಜಾರು ಮದಗ ಶ್ರೀ ಜರ್ನಾರ್ದನ ದೇವಸ್ಥಾನದ ಸಮಿತಿ ಸದಸ್ಯ ರೋಹನ್ ರಾಜ್, ಲೋಕೇಶ್ ಗೌಡ ಪಡ್ಡಾಯೂರು ಮತ್ತಿತರರು ಹಾಜರಿದ್ದು, ಜಾಗಕ್ಕೆ ಬೇಲಿ ಹಾಕಿ “ದೇವಳದ ನಿವೇಶನ” ಎಂಬ ನಾಮಫಲಕ ಅಳವಡಿಸಿದರು.
ಈಶ್ವರ ಭಟ್ ಪಂಜಿಗುಡ್ಡೆಯವರು ಮಾದ್ಯಮದ ಜೊತೆ ಮಾತನಾಡಿ ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ದೇವಳದ ವಿವಿಧ ಅಭಿವೃದ್ದಿ ಕಾರ್ಯ ಮತ್ತು ಜಾಗ ಸ್ವಾಧೀನ ಕಾರ್ಯ ಮಾಡುತ್ತಿದ್ದೇವೆ. ನಮ್ಮ ವ್ಯವಸ್ಥಾಪನಾ ಸಮಿತಿ ಬಂದು ಆರೇಳು ತಿಂಗಳಾಯಿತು. ಈ ನಡುವೆ ನಾವು ದೇವಳಕ್ಕೆ ಸಂಬಂಧಿಸಿದ ಜಾಗ ಒತ್ತುವರಿ ಮಾಡಿ ಸುಮಾರು ರೂ.25 ಕೋಟಿಯಷ್ಟು ಮೌಲ್ಯದ ಜಾಗವನ್ನು ದೇವಳಕ್ಕೆ ಮಾಡಿಕೊಟ್ಡಿದ್ದೇವೆ. ಕಳೆದ ಕೆಲವು ಸಮಯ ನಾವು ಜಾಗ ಒತ್ತುವರಿಗೆ ತಡ ಮಾಡಿದ್ದೆವು. ಯಾಕೆಂದರೆ ಒತ್ತುವರಿ ಮಾಡಿಕೊಂಡವರಿಂದ ಸೌಹಾರ್ದತೆಯಲ್ಲಿ ಜಾಗ ದೇವಳಕ್ಕೆ ಪಡೆಯುವಲ್ಲಿ ಶಾಸಕರ ಮುಂದಾಳತ್ವದಲ್ಲಿ ಮಾಡಿದ್ದೇವೆ. ಒಟ್ಟಿನಲ್ಲಿ ಮುಂದೆ ನೆಲ್ಲಿಕಟ್ಟೆಯಲ್ಲೂ ಜಾಗ ಸ್ವಾಧೀನ ನಡೆಯಲಿದೆ ಎಂದರು.