ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಲ್ಲಾ ಮಾದರಿಯ ಗೃಹಬಳಕೆದಾರರಿಗೆ ಮಾಸಿಕ 125 ಯೂನಿಟ್‌ಗಳ ವರೆಗೆ ಉಚಿತ್ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಆರಂಭದಿಂದಲೂ ಎಲ್ಲರಿಗೂ ಕೈಗೆಟುಕುವ ದರದಲ್ಲಿ ವಿದ್ಯುತ್ ಒದಗಿಸುತ್ತಿದ್ದೇವೆ. ಈಗ ನಾವು ಆಗಸ್ಟ್ 1, 2025 ರಿಂದ ಅಂದರೆ ಜುಲೈ ತಿಂಗಳ ಬಿಲ್‌ನಿಂದ ರಾಜ್ಯದ ಎಲ್ಲಾ ಗೃಹಬಳಕೆದಾರರು 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ನಿರ್ಧರಿಸಿದ್ದೇವೆ. ಇದು ರಾಜ್ಯದ ಒಟ್ಟು 1 ಕೋಟಿ 67 ಲಕ್ಷ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಈ ಎಲ್ಲಾ ಗೃಹಬಳಕೆದಾರರಿಂದ ಒಪ್ಪಿಗೆ ಪಡೆದ ನಂತರ, ಅವರ ಮನೆಗಳ ಛಾವಣಿಯ ಮೇಲೆ ಅಥವಾ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ಪ್ರಯೋಜನಗಳನ್ನು ನೀಡಲಾಗುವುದು ಎಂದು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಮುಂದುವರಿದು ಕುಟೀರ ಜ್ಯೋತಿ ಯೋಜನೆಯಡಿಯಲ್ಲಿ, ಅತ್ಯಂತ ಬಡ ಕುಟುಂಬಗಳಿಗೆ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಮತ್ತು ಉಳಿದವರಿಗೆ ಸರ್ಕಾರವು ಸರಿಯಾದ ಬೆಂಬಲವನ್ನು ನೀಡುತ್ತದೆ. ಇದರೊಂದಿಗೆ ಗೃಹಬಳಕೆದಾರರು ಇನ್ನು ಮುಂದೆ 125 ಯೂನಿಟ್‌ಗಳವರೆಗೆ ವಿದ್ಯುತ್ ಅನ್ನು ಖರ್ಚು ಮಾಡಬೇಕಾಗಿಲ್ಲ, ಹಾಗೆಯೇ ಒಂದು ಅಂದಾಜಿನ ಪ್ರಕಾರ, ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್‌ಗಳವರೆಗೆ ಸೌರಶಕ್ತಿ ಲಭ್ಯವಿರಲಿದೆ ಎಂದಿದ್ದಾರೆ. ಗ್ಯಾರಂಟಿ ಮಾದರಿ ಯೋಜನೆಯನ್ನು ಬಿಹಾರದ ಬಿಜೆಪಿ-ಜೆಡಿಯು ಸಮ್ಮಿಶ್ರ ಸರಕಾರ ಕಾಪಿ ಮಾಡಿದೆ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಬಿಜೆಪಿ ಟೀಕಿಸುತ್ತಿತ್ತು. ಆದರೆ ತಾನು ಎಲ್ಲಾ ರಾಜ್ಯಗಳಲ್ಲೂ ಇದೇ ಮಾದರಿಯನ್ನು ನಕಲು ಮಾಡುತ್ತಿದೆ. ಈಗ ಚುನಾವಣೆಯ ಹತ್ತಿರವಿರುವ ಬಿಹಾರದಲ್ಲಿ ಬಿಜೆಪಿ-ಜೆಡಿಯು ಸಮ್ಮಿಶ್ರ ಸರಕಾರವು ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದೆ. ಇದು ಬಿಜೆಪಿಯ ದ್ವಂದ್ವವನ್ನು ತೋರಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ನಾವು ರಾಜ್ಯದಲ್ಲಿ ಮಹಿಳೆಯರ ನೆರವಿಗೆ ಗೃಹಲಕ್ಷ್ಮಿ ಯೋಜನೆಯನ್ನು ತಂದೆವು. ಬಿಜೆಪಿ ಇದನ್ನು ಟೀಕಿಸಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಅದೇ ಬಿಜೆಪಿ ಸರಕಾರವು ಇದನ್ನು ಲಾಡ್ಲಿ ಬೆಹೆನ್ ಹೆಸರಿನಲ್ಲಿ ನಕಲು ಮಾಡಿತು. ದೆಹಲಿಯಲ್ಲೂ ಆ ಪಕ್ಷ ಇದನ್ನೇ ಮಾಡಿದೆ. ಈಗ ಬಿಹಾರವೂ ನಮ್ಮ ಮಾದರಿಯನ್ನೇ ಅನುಕರಿಸಿದೆ ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿಯವರು ಗ್ಯಾರಂಟಿ ಕೊಟ್ಟರೆ ಮಾತ್ರ ಸರಿ, ನಾವು ಕೊಟ್ಟರೆ ಖಜಾನೆ ಖಾಲಿ ಆಗುತ್ತದೆ ಎನ್ನುವ ಧೋರಣೆ ಸರಿಯಲ್ಲ. ನಾವು ನೀಡುತ್ತಿರುವ ಗ್ಯಾರಂಟಿಗಳು ದೇಶಕ್ಕೇ ಮಾದರಿಯಾಗಿವೆ. ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಶನಿವಾರ ಸಮಾವೇಶ ನಡೆಸಲಾಗುತ್ತಿದೆ. ಇದನ್ನು ಟೀಕಿಸುವುದರ ಬದಲು ಮುಖ್ಯಮಂತ್ರಿ ಹೇಳಿದ ಹಾಗೆ ಚರ್ಚೆ ಒಂದು ವೇದಿಕೆಗೆ ಬರಲಿ. ಅವರು ಏನು ಮಾಡಿದ್ದರು ಎಂದು ಪ್ರಶ್ನಿಸಿದ್ದಾರೆ. ನಾವು ಏನು ಮಾಡಿದ್ದೇವೆ ಎನ್ನುವುದನ್ನು ಚರ್ಚಿಸಲಾಗುತ್ತದೆ ಎಂದು ಹೇಳಿದರು. ಜನರಿಗೆ ಹೇಳಲು ನಮ್ಮ ಸಾಕಷ್ಟು ಸಾಧನೆಗಳಿವೆ ಎಂದು ಅವರು ಹೇಳಿದ್ದಾರೆ.