ಬೆಂಗಳೂರು: ಭಾರತೀಯ ನ್ಯಾಯ ಸಂಹಿತೆಯ ನಾಲ್ಕು ಕಾಯ್ದೆಗಳಡಿ ಎಫ್ಐಆರ್ ದಾಖಲಿಸುವ ಮುನ್ನ ತನಿಖಾಧಿಕಾರಿಗಳು ಕಡ್ಡಾಯವಾಗಿ ಮೇಲಾಧಿಕಾರಿಗಳ ಅನುಮತಿ ಪಡೆಯುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ ಎಂ.ಎ. ಸಲೀಂ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಬಿಎನ್‌ಎಸ್‌ನ 304, 103(2), 111 ಹಾಗೂ 113(B) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿರಲಿದೆ.
ಡಿಸಿಪಿ ಹಂತದ ಅಧಿಕಾರಿಗಳಿಂದ ಲಿಖಿತ ಅನುಮತಿ ಕಡ್ಡಾಯ: ಬಿಎನ್ಎಸ್ 304, 103(2) ಹಾಗೂ 111 ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಎಎಸ್‌ಪಿ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಹಂತದ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದಿರಬೇಕು. 113(B) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಎಸ್‌ಪಿ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯವರನ್ನೊಳಗೊಂಡಂತೆ ಮೇಲಾಧಿಕಾರಿಯಿಂದ ಲಿಖಿತ ಅನುಮತಿ ಪಡೆದಿರಬೇಕು.
ತುರ್ತು ಕಾರ್ಯಗಳ ನಿಮಿತ್ತ ಮೌಖಿಕವಾಗಿ ಆದೇಶ ಪಡೆದರೆ, 24 ಗಂಟೆಗಳೊಳಗೆ ಲಿಖಿತ ಅನುಮತಿ ಪಡೆದಿರಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ ನಂತರವಷ್ಟೇ ಆ ಕಾಯ್ದೆಗಳಡಿ ಎಫ್ಐಆರ್ ದಾಖಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಈ ಕಾಯ್ದೆಗಳು ಹೇಳುವುದೇನು:
- 304 – ಕಳ್ಳತನದ ಸಲುವಾಗಿ, ಯಾವುದೇ ವ್ಯಕ್ತಿಯಿಂದ ಅಥವಾ ಅವನ ಸ್ವಾಧೀನದಿಂದ ಯಾವುದೇ ಚರ ಆಸ್ತಿಯನ್ನು ದೋಚುವುದು ಅಥವಾ ಕಸಿದುಕೊಳ್ಳುವುದು
- 103(2) – ನಿರ್ದಿಷ್ಟವಾಗಿ ಜನಾಂಗ, ಜಾತಿ, ಸಮುದಾಯ, ಲಿಂಗ, ಜನ್ಮಸ್ಥಳ, ಭಾಷೆ ಅಥವಾ ವೈಯಕ್ತಿಕ ನಂಬಿಕೆಯಂತಹ ಅಂಶಗಳ ಆಧಾರದ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪು ಒಟ್ಟಾಗಿ ವರ್ತಿಸಿ ಮಾಡುವ ಹತ್ಯೆಗೆ ಶಿಕ್ಷೆಯನ್ನು ವಿಧಿಸುತ್ತದೆ.
- 111 – ಸಂಘಟಿತ ಅಪರಾಧ, ಇಬ್ಬರು ಅಥವಾ ಹೆಚ್ಚಿನವರ ಗುಂಪು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುವುದು.
- 113(B)- ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ, ಭದ್ರತೆ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆ ಹಾಕುವ ಉದ್ದೇಶವನ್ನು ಹೊಂದಿರುವ ಕೃತ್ಯಗಳಲ್ಲಿ ಭಾಗಿಯಾಗುವುದು ಅಥವಾ ಜನರಲ್ಲಿ ಭಯ ಉಂಟುಮಾಡುವ ಸಾಧ್ಯತೆ ಇರುವ ಕೃತ್ಯಗಳಲ್ಲಿ ಭಾಗಿಯಾಗುವಿಕೆ.
ಭಾರತೀಯ ನ್ಯಾಯ ಸಂಹಿತೆಯ ಕೆಲ ಕಾಯ್ದೆಗಳು ಸಾಮಾನ್ಯವಾಗಿ ದುರ್ಬಳಕೆಯಾಗುವುದನ್ನು ನಿಗ್ರಹಿಸಲು ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಕಾಯ್ದೆಗಳನ್ನು ಸೇರಿಸಲು ಮೇಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ ಮಾಡುವುದರಿಂದ ದುರ್ಬಳಕೆಯಾಗದಂತೆ ತಡೆಯಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.