ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಶುಕ್ರವಾರ ಮಾಜಿ ಸಂಸದ ದೋಷಿ ಎಂದು ತೀರ್ಪು ನೀಡಿದ್ದರು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.
ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ 10 ಲಕ್ಷ ರೂ. 7 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ.
ಇದೊರಂದಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದ್ದು, ಇನ್ನೂ ಮೂರು ಪ್ರಕರಣಗಳ ವಿಚಾರಣೆ ಬಾಕಿ ಇದೆ.
ಇದಕ್ಕೂ ಮುನ್ನ ಪ್ರಾಸಿಕ್ಯೂಷನ್ ಪರ ವಕೀಲರಾದ ಬಿಎನ್ ಜಗದೀಶ್, ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ ಪ್ರಜ್ವಲ್ಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದಾದ ನಂತರ ವಾದ ಮಂಡನೆ ಮಾಡಿದ್ದ ಪ್ರಜ್ವಲ್ ಪರ ವಕೀಲೆ ನಳಿನಿ ಮಾಯೇಗೌಡ, ಶಿಕ್ಷೆ ನೀಡುವ ವೇಳೆ ಅಪರಾಧಿಯ ರಾಜಕೀಯ ಭವಿಷ್ಯ, ವಯಸ್ಸು ಇತ್ಯಾದಿಗಳನ್ನೆಲ್ಲ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.
ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ) ನಂತರ ಪ್ರಕರಣವನ್ನು ಸಿಐಡಿಗೆ ಹವರ್ಗಾವಣೆ ಆಗಿತ್ತು.
ಸಿಐಡಿ ಇನ್ಸ್‌ಪೆಕ್ಟರ್ ಶೋಭಾ ಅವರು ತನಿಖೆಯ ನೇತೃತ್ವ ವಹಿಸಿದ್ದರು ಮತ್ತು 26 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಸುಮಾರು 2 ಸಾವಿರ ಪುಟಗಳ ಚಾರ್ಜ್ ಶೀಟನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಸಲ್ಲಿಸಿದ್ದರು.
ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಮೂರು ಅತ್ಯಾಚಾರ ಪ್ರಕರಣಗಳು ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿವೆ.
ಪ್ರಜ್ವಲ್ ರೇವಣ್ಣ ಶಿಕ್ಷೆಯ ವಿವರ: ಯಾವ ಸೆಕ್ಷನ್ ಅಡಿ ಎಷ್ಟು ಶಿಕ್ಷೆ, ದಂಡ?
- ಐಪಿಸಿ ಸೆಕ್ಷನ್ 376 (2)(k)ರಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ
- 376(2)(n) ಅಡಿ ಪದೇಪದೆ ಅತ್ಯಾಚಾರಕ್ಕೆ ಜೀವನಪರ್ಯಂತ ಜೈಲು, 5 ಲಕ್ಷ ರೂ. ದಂಡ
- ಐಪಿಸಿ ಸೆಕ್ಷನ್ 354(A) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ
- ಐಪಿಸಿ ಸೆಕ್ಷನ್ 354 (B) ಅಡಿ 7 ವರ್ಷ ಸೆರೆವಾಸ, 50,000 ರೂಪಾಯಿ ದಂಡ
- ಐಪಿಸಿ ಸೆಕ್ಷನ್ 354 (c) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ
- ಸೆಕ್ಷನ್ 506 ಅಡಿ 2 ವರ್ಷ ಸೆರೆವಾಸ 10,000 ರೂ. ದಂಡ
- ಸೆಕ್ಷನ್ 201 ಅಡಿ 3 ವರ್ಷ ಸೆರೆವಾಸ 25,000 ರೂ. ದಂಡ
- ಐಟಿ ಕಾಯ್ದೆ ಸೆ.66(E) ಅಡಿ 3 ವರ್ಷ 25,000 ರೂ. ದಂಡ.
- ಪ್ರಜ್ವಲ್ ರೇವಣ್ಣಗೆ ಇಂದಿನಿಂದಲೇ ಶಿಕ್ಷೆ ಆರಂಭ, ಇಲ್ಲಿಯವರೆಗಿನ ಜೈಲುವಾಸ ಮೈನಸ್ ಆಗುವುದಿಲ್ಲ.
- ಏಕೆಂದರೆ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗಿರಲಿಲ್ಲ, ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್‌ನನ್ನು ವಶಕ್ಕೆ ಪಡೆಯಲಾಗಿತ್ತು.
ಹಲವು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಬಂಧಿಸಿತ್ತು. ಅಂದಿನಿಂದ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ.
ಇದೇ ಪ್ರಕರಣದಲ್ಲಿ ಪ್ರಜ್ವಲ್ ಅವರ ತಂದೆ ಎಚ್.ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ, ನಂತರ ಅವರಿಗೆ ಜಾಮೀನು ನೀಡಲಾಯಿತು ಮತ್ತು ದೂರಿನಲ್ಲಿ ಆರೋಪಿ ಎಂದು ಹೆಸರಿಸಲಾದ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಹೀಗಾಗಿ ಬಂಧನದಿಂದ ತಪ್ಪಿಸಿಕೊಂಡರು.