ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಅನಾಮಿಕನ ದೂರಿನ ಮೇರೆಗೆ ಉತ್ಖನನ ಕಾರ್ಯ ನಡೆಯುತ್ತಿದ್ದು ಇಂದು ಬಂಗ್ಲಗುಡ್ಡದಲ್ಲಿ ನಡೆಯುತ್ತಿರುವ ಈ ಉತ್ಖನನ ಕಾರ್ಯವು ಊಟದ ಬ್ರೇಕ್ ಇಲ್ಲದೆ ತೀವ್ರಗತಿಯಲ್ಲಿ ನಡೆಯುತ್ತಿದೆ, ಕಾಡಿನಲ್ಲಿ ಕೆಲವು ಅಸ್ಥಿಪಂಜರದ ಭಾಗಗಳು ಮತ್ತು ಮೂಳೆಗಳು ಸಿಕ್ಕಿರುವುದು ತನಿಖೆಗೆ ಹೊಸ ಆಯಾಮವನ್ನು ತಂದಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಅನಾಮಿಕ ವ್ಯಕ್ತಿ ಸದ್ಯ 13 ಜಾಗಗಳನ್ನು ಗುರುತಿಸಿದ್ದ. ಈ ಪೈಕಿ 11 ನೇ ಸ್ಥಳದಲ್ಲಿ ಉತ್ಖನನ ಕಾರ್ಯ ಇಂದು ನಡೆಯಬೇಕಿತ್ತು. ಆದರೆ ಈ ವೇಳೆ ದೂರುದಾರ ಗುಡ್ಡದ ಮೇಲ್ಭಾಗಕ್ಕೆ ಕರೆದೊಯ್ದಿದ್ದು, ಅಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈ ವೇಳೆ ಅಲ್ಲಿ ಕೆಲವು ಮೂಳೆಗಳು ಸಿಕ್ಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅನಾಮಿಕ ತೋರಿಸಿದ ಜಾಗದಲ್ಲಿ ಉತ್ಖನನ ಮುಂದುವರೆದಿದೆ.
ಈವರೆಗಿನ ತನಿಖೆಯಲ್ಲಿ ಗುಂಡಿ 6ರಲ್ಲಿ 25 ಮೂಳೆಗಳು ಸಿಕ್ಕಿದ್ದು, ಇವು ಪುರುಷನ ಅಸ್ಥಿಪಂಜರದ ಭಾಗಗಳೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಮೂಳೆಗಳನ್ನು ಫಾರೆನ್ಸಿಕ್ ತಪಾಸಣೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಆದರೆ, ಉಳಿದ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಸಿಕ್ಕಿಲ್ಲ, ಇದರಿಂದ ಎಸ್‌ಐಟಿಯ ತನಿಖೆಗೆ ಸವಾಲು ಎದುರಾಗಿತ್ತು. ಇದೀಗ ಮತ್ತೆ ಕಳೇಬರ ಸಿಕ್ಕಿರುವುದು ಮತ್ತೊಂದು ಕುತೂಹಲದತ್ತ ದಾರಿ ಮಾಡಿಕೊಟ್ಟಿದೆ.
ಪಾಯಿಂಟ್ ನಂಬರ್ 11ರ ಸ್ಥಳದಲ್ಲಿ ನಡೆಯುತ್ತಿರುವ ಉತ್ಖನನವು ಗುಡ್ಡದ ಮೇಲ್ಭಾಗದಲ್ಲಿದ್ದು, ಈ ಸ್ಥಳವನ್ನು ಗುರುತಿಸಲು ಅನಾಮಿಕ ವ್ಯಕ್ತಿಯು ಎಸ್‌ಐಟಿ ತಂಡವನ್ನು ಕರೆದೊಯ್ದಿದ್ದ. ಆದರೆ, ಈ ಸ್ಥಳದಲ್ಲಿ ಸ್ಪಷ್ಟ ಮಾಹಿತಿಯ ಕೊರತೆಯಿಂದ ತನಿಖೆಗೆ ಗೊಂದಲ ಉಂಟಾಗಿತ್ತು. ಆದರೂ ಎಸ್‌ಐಟಿಯು ಈಗ ಈ ಗುಡ್ಡದ ಮೇಲಿನ ಸ್ಥಳದಲ್ಲಿ ತೀವ್ರವಾಗಿ ಶೋಧ ಕಾರ್ಯವನ್ನು ಮುಂದುವರಿಸಿದೆ. ಈ ಕಾರ್ಯಾಚರಣೆಯಲ್ಲಿ ಶಸ್ತ್ರಸಜ್ಜಿತ ಗನ್‌ಮ್ಯಾನ್‌ಗಳೊಂದಿಗೆ ಬಿಗಿಭದ್ರತೆಯನ್ನು ಕಾಪಾಡಲಾಗಿದ್ದು, ವಿಡಿಯೋ ರೆಕಾರ್ಡಿಂಗ್ ಮೂಲಕ ಪ್ರತಿಯೊಂದು ಚಟುವಟಿಕೆಯನ್ನು ದಾಖಲಿಸಲಾಗುತ್ತಿದೆ.
ಈ ಉತ್ಖನನ ಕಾರ್ಯವು ಇಂದು ಊಟದ ವಿರಾಮವಿಲ್ಲದೇ ನಡೆಯುತ್ತಿದೆ. ಎಸ್‌ಐಟಿಯ ಸಿಬ್ಬಂದಿಗಳು ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಡಿನ ಒಳಗಿನ ಕಷ್ಟಕರ ಸ್ಥಳಗಳಲ್ಲಿ ಶೋಧ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ಈ ಪ್ರಕರಣವು 1995ರಿಂದ 2014ರವರೆಗಿನ ಕೊಲೆ, ಅತ್ಯಾಚಾರ, ಮತ್ತು ಅಸಹಜ ಸಾವುಗಳಿಗೆ ಸಂಬಂಧಿಸಿರಬಹುದೆಂದು ಶಂಕಿಸಲಾಗಿದೆ. ಈ ಕಾರಣದಿಂದ, ತನಿಖೆಯನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ.
ಇನ್ನೂ BLR ಪೋಸ್ಟ್ ಎಂಬ ವೆಬ್ ಸೈಟ್ ಕೂಡ ಈ ಕುರಿತು ವರದಿ ಮಾಡಿದ್ದು, ಅದರಲ್ಲಿ ” ಎಸ್ ಐಟಿ ತಂಡಕ್ಕೆ ಈಗಾಗಲೇ ತಲೆಬುರುಡೆಗಳು ಸೇರಿದಂತೆ ಅನೇಕ ಮಾನವ ಅಸ್ಥಿಪಂಜರದ ಭಾಗಗಳು ಸಿಕ್ಕಿವೆ.” ಈ ಹಿಂದೆ ಕೆಲವು ಕಡೆಗಳಲ್ಲಿ ನಡೆಸಿದ ಅಗೆತ ಯಶಸ್ವಿಯಾಗಿರಲಿಲ್ಲ. ಆದರೆ, ಈಗ ಸುಮಾರು 100 ಅಡಿ ಎತ್ತರದ ಪ್ರದೇಶದಲ್ಲಿ ಅಸ್ಥಿಪಂಜರಗಳು ಸಿಕ್ಕಿದೆ ಅಗೆತದ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ವರದಿ ಮಾಡಿದೆ. ಈ ವೆಬ್ ಸೈಟ್ ಈ ಮಾಹಿತಿಯನ್ನು ಎಸ್ ಐಟಿಯ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವುದಾಗಿ ತಿಳಿಸಿದೆ.
ಈ ರಹಸ್ಯಮಯ ಪ್ರಕರಣವು ಸ್ಥಳೀಯ ಜನರಲ್ಲಿ ಭಯ ಮತ್ತು ಕುತೂಹಲವನ್ನು ಹುಟ್ಟಿಸಿದೆ. ಅನಾಮಿಕ ವ್ಯಕ್ತಿಯ ಆರೋಪಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಎಸ್‌ಐಟಿಯು ಅನಾಮಿಕ ಗುರುತಿಸಿರುವ ಉಳಿದ 17 ಸ್ಥಳಗಳ ಉತ್ಖನನವನ್ನು ಎರಡನೇ ಹಂತದಲ್ಲಿ ಕೈಗೊಳ್ಳಲು ಸಿದ್ಧತೆ ಮಾಡುತ್ತಿದೆ. ಈ ಕಾರ್ಯಾಚರಣೆಯ ಫಲಿತಾಂಶವು ಈ ಪ್ರಕರಣದ ಸತ್ಯವನ್ನು ಬಯಲಿಗೆ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.