ಪುತ್ತೂರು : ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ನೇತೃತ್ವದ ಸಮರ್ಪಣ ಮಹಿಳಾ ಸೇವಾ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಯ ನೇತೃತ್ವದಲ್ಲಿ ವರ್ಷಂಪ್ರತಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಗೆ ಮಹಾಲಿಂಗೇಶ್ವರ ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನಪ್ರಸಾದವನ್ನು ಈ ಬಾರಿ ನೀಡುತ್ತಿಲ್ಲ ಎನ್ನುವ ವಿಚಾರವೀಗ ಚರ್ಚೆಗೆ ಈಡಾಗಿದೆ.
ಕಳೆದ 17 ವರ್ಷಗಳಿಂದ ಇಲ್ಲಿ ವರ ಮಹಾಲಕ್ಷ್ಮೀ ಪೂಜೆ ನಡೆಯುತ್ತಿದ್ದು ಹಲವು ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವತಿಯಿಂದ ಮಧ್ಯಾಹ್ನದ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಾರಿಯು ಆ.8 ರಂದು ಪೂಜೆ ನಿಗದಿ ಆಗಿದ್ದು ಆದರೆ ದೇವಾಲಯದ ವತಿಯಿಂದ ಅನ್ನದಾನ ನೀಡಲಾಗುತ್ತಿಲ್ಲ ಎನ್ನುವ ಮಾಹಿತಿ ದೊರತಿದೆ. ಈ ಮಧ್ಯೆ ಕೃಷ್ಣಲೋಕ ಕಾರ್ಯಕ್ರಮ, ಬಜರಂಗದಳದ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಕ್ರಮಗಳಿಗೆ ದೇವಾಲಯದ ವತಿಯಿಂದ ಅನ್ನದಾನ ನೀಡಲು ನಿರ್ಧರಿಸಲಾಗಿದ್ದು ಆದರೆ ವರ ಮಹಾಲಕ್ಷ್ಮಿಪೂಜೆಗೆ ಮಾತ್ರ ನಿರಾಕರಿಸಿರುವ ಬಗ್ಗೆ ಪ್ರಶ್ನೆ ಮೂಡಿದೆ.
ದೇವಾಲಯದ ಆಡಳಿತ ಸಮಿತಿಯು ಕಾಂಗ್ರೆಸ್ ಸರಕಾರದಿಂದ ನಿಯೋಜನೆಗೊಂಡಿದ್ದು, ಇನ್ನೊಂದೆಡೆ ವರ ಮಹಾಲಕ್ಷ್ಮಿ ಪೂಜೆ ಕಾಂಗ್ರೆಸ್ ನಾಯಕಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿದ್ದು ಅದಾಗ್ಯೂ ಅನ್ನದಾನ ನಿರಾಕರಣೆ ಹಿಂದೆ ಕುತೂಹಲ ಮೂಡಿಸಿದೆ.
ಅನ್ನದಾನದ ಬಗ್ಗೆ ವರಮಹಾಲಕ್ಷ್ಮೀ ಸಮಿತಿಯವರು ದೇವಾಲಯದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದ್ದು ಆಗ ಸ್ಪಷ್ಟ ಉತ್ತರ ದೊರೆತಿರಲಿಲ್ಲ ಎನ್ನಲಾಗಿದೆ. ಅದಾದ ಬಳಿಕ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಖುದ್ದಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ದು ಆಗ ಅವರು ಸಂಪರ್ಕಕ್ಕೆ ಸಿಗಲಿಲ್ಲ. ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಕೆಲ ದಿನಗಳ ನಂತರ ಶಕುಂತಲಾ ಶೆಟ್ಟಿ ಅವರು ಈಶ್ವರ ಭಟ್ ಅವರಿಗೆ ಕರೆ ಮಾಡಿದ್ದು ಆಗಲೂ ಸ್ಪಷ್ಟ ಉತ್ತರ ದೊರೆಯದ ಕಾರಣ ಸಮಿತಿಯವರೂ ದೇವಸ್ಥಾನದ ಅನ್ನದಾನ ಸಿಗದೆ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವರಮಹಾಲಕ್ಷ್ಮೀ ಪೂಜೆಯು ಸಭಾಭವನದಲ್ಲಿ ನಡೆಯುತ್ತಿದ್ದು ಅಲ್ಲಿಗೆ ಅನ್ನದಾನ ವ್ಯವಸ್ಥೆ ಮಾಡಲು ದೇವಾಲಯಕ್ಕೆ ನಿರ್ಧಿಷ್ಟ ಶುಲ್ಕ ಪಾವತಿಸಬೇಕು ಎನ್ನುವ ಬೇಡಿಕೆ ಇತ್ತು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ದೇವಾಲಯದಿಂದ ಹೊರಭಾಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಉಚಿತವಾಗಿ ಅನ್ನದಾನ ನೀಡುವ ಬದಲು ಒಬ್ಬರಿಗೆ 50 ರೂ.ನಂತೆ ದರ ನಿಗದಿಪಡಿಸುವ ಹೇಳಿಕೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಟೆ ಅವರನ್ನು ಸಂಪರ್ಕಿಸಿದಾಗ, ವರಮಹಾಲಕ್ಷ್ಮೀ ಪೂಜಾ ಸಮಿತಿಯವರು ನಮ್ಮಲ್ಲಿ ಅನ್ನದಾನಕ್ಕೆ ಬೇಡಿಕೆ ಇಟ್ಟಿಲ್ಲ. ಬೇಡಿಕೆ ಇಟ್ಟವರಿಗೆ ನೀಡಿದ್ದೇವೆ. ಕೃಷ್ಣಲೋಕ ಕಾರ್ಯಕ್ರಮಕ್ಕೆ 3 ಸಾವಿರ ಊಟ, ಬಜರಂಗದಳದವರಿಗೆ 2 ಸಾವಿರ ಊಟ ನೀಡಲಿದ್ದೇವೆ ಎಂದಿದ್ದಾರೆ.
ಶ್ರೀ ವರಮಹಾಲಕ್ಷ್ಮೀ ಸಮಿತಿಯವರು ಜತೆ ಮಾತನಾಡಿದಾಗ ಕಳೆದ ಹಲವು ವರ್ಷದಿಂದ ದೇವಾಲಯದ ವತಿಯಿಂದ ಅನ್ನದಾನದ ವ್ಯವಸ್ಥೆ ಮಾಡುತ್ತಿದ್ದರು. ಈ ಬಾರಿಯು ಬೇಡಿಕೆ ಇಟ್ಟಿದ್ದೇವೆ. ಸ್ವತಃ ದೇವಾಲಯದ ಅಧ್ಯಕ್ಷರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದೇವು. ಆದರೆ ಅಲ್ಲಿಂದ ಉತ್ತರ ಸಿಗಲಿಲ್ಲ. ಹೀಗಾಗಿ ಖಾಸಗಿಯಾಗಿ ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.