ಪುತ್ತೂರು: ಪುತ್ತೂರು ನಗರಸಭೆಯ ನೂತನ ಪೌರಾಯುಕ್ತರಾಗಿ ಬೆಳ್ತಂಗಡಿಯ ವಿದ್ಯಾ ಎಂ. ಕಾಳೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಗರಸಭಾ ಪೌರಾಯುಕ್ತರಾಗಿದ್ದ ಮಧು ಎಸ್.ಮನೋಹರ್ ಅವರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಿದ್ಯಾ ಎಂ. ಕಾಳೆ ಅವರು ಪದೋನ್ನತಿ ಹೊಂದಿ ಪುತ್ತೂರು ನಗರಸಭೆ ಪೌರಾಯುಕ್ತರಾಗಿನೇಮಕವಾಗಿದ್ದು ಜು.25ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಎಸ್.ಮಧು ಮನೋಹರ್ ಅವರು ವಿದ್ಯಾಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕೆಎಎಸ್ 2011ರ ಗೆಜಟೆಡ್ ಪ್ರೊಬೆಷನರಿ ಬ್ಯಾಚಿನ ಅಧಿಕಾರಿಯಾಗಿರುವ ವಿದ್ಯಾ ಅವರು ಆರಂಭದಲ್ಲಿ ತರೀಕೆರೆ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಬಳಿಕ ಉಳ್ಳಾಲ ನಗರಸಭೆಯಲ್ಲಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿ ಬಳಿಕ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮುಖ್ಯಾಧಿಕಾರಿ ಶ್ರೇಣಿ-1ರಿಂದ ಪೌರಾಯುಕ್ತರು ಶ್ರೇಣಿ-2 ಸ್ಥಾನಕ್ಕೆ ಪದೋನ್ನತಿ ಹೊಂದಿರುವ ಇವರು ಇದೀಗ ಪುತ್ತೂರು ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿದ್ಯಾ ಅವರು ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ನಿವೃತ್ತ ಸರಕಾರಿ ವೈದ್ಯ ದಿ. ಡಾ. ವೀರೇಶ್ವರ್ ಭಟ್ ಮತ್ತು ಉಮಾ ವಿ.ಭಟ್ ದಂಪತಿಯ ಪುತ್ರರಾದ ಉದ್ಯಮಿ ಹಾಗೂ ಕೃಷಿಕ ಸಂದೇಶ್ ಡೋಂಗ್ರೆಯವರ ಪತ್ನಿ. ವಿದ್ಯಾರವರು ಶಿವಮೊಗ್ಗ ಸೊರಬದವರಾಗಿರುವ ಡಾ. ಮನೋಹರ ಕಾಳೆ ಮತ್ತು ಶ್ಯಾಮಲಾ ಕಾಳೆ ಅವರ ಪುತ್ರಿ.