ಧರ್ಮಸ್ಥಳದ ಆರಣ್ಯ ಭಾಗಗಳಲ್ಲಿ ಶವ ಹೂತಿಡಲಾಗಿದೆ ಎನ್ನುವ ಕೇಸ್ ಇದೀಗ ಭಾರೀ ಸಂಚಲನ ಮೂಡಿಸಿದೆ. ಎಸ್ಐಟಿ ಈ ಬಗ್ಗೆ ತನಿಖೆ ಕೂಡ ನಡೆಸುತ್ತಿದೆ. ಇದೀಗ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಹೊಸ ಆರೋಪ ಮಾಡಿದ್ದಾರೆ.
ಜಿಪಿಅರ್ ಯಂತ್ರಗಳ ಕೃತಕ ಅಭಾವ ಸೃಷ್ಟಿ ಬಗ್ಗೆ ವಕೀಲ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಈ ಯಂತ್ರಗಳನ್ನ ಒದಗಿಸುವ ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಲಾಗಿದೆ ಎಂದು ಆರೋಪ ಮಾಡ್ತಿದ್ದಾರೆ. ನಿಜಕ್ಕೂ ಜಿಪಿಆರ್ ತಂತ್ರಜ್ಞಾನದ ಕೊರತೆ ಹಾಗೂ ಲಭ್ಯತೆಯ ಕೊರತೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಹೊಸ ಸಾಕ್ಷಿದಾರರು ಇಂದು ಬೆಳ್ತಂಗಡಿ ಎಸ್ ಐಟಿ ಕಛೇರಿಯಲ್ಲಿ ಮುಖ್ಯಸ್ಥ ಪ್ರಣವ್ ಮೋಹಾಂತಿಯವರನ್ನು ಭೇಟಿಯಾಗಿ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರನ್ನು ವಿಚಾರಣೆ ನಡೆಸುವ ಉದ್ದೇಶದಿಂದ ಹಾಗೂ ತನಿಖೆಯ ಪ್ರಗತಿ ಪರಿಶೀಲನೆಗಾಗಿಯೇ ಮೊಹಾಂತಿ ಅವರು ಭೇಟಿ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಈ ಶಂಕಿತ ಸಾಕ್ಷಿದಾರರು, ಅನಾಮಧೇಯ ದೂರುದಾರನು ಶವಗಳನ್ನು ಹೂಳುವುದನ್ನು ಈ ಹಿಂದೆ ನೋಡಿದ್ದರು ಎನ್ನಲಾಗುತ್ತಿದೆ. ಈ ಕುರಿತು ‘ಬಿಎಲ್ಆರ್ ಪೋಸ್ಟ್’ ವೆಬ್ಸೈಟ್ ಕೂಡ ವರದಿ ಮಾಡಿದ್ದು, ಈ ಸಾಕ್ಷಿದಾರರೇ ಶವ ಹೂತಿರುವ ಸ್ಥಳಗಳನ್ನು ತೋರಿಸಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಹೇಳಿದೆ. ಧರ್ಮಸ್ಥಳದಂತಹ ಸೀಮಿತ ಪ್ರದೇಶದಲ್ಲಿ ಗೌಪ್ಯವಾಗಿ ಕೃತ್ಯ ನಡೆದಿದ್ದರೂ, ಅದು ಕೆಲ ಸ್ಥಳೀಯರ ಗಮನಕ್ಕೆ ಬಂದಿರುವ ಸಾಧ್ಯತೆ ದಟ್ಟವಾಗಿದೆ. ಅವರಲ್ಲಿ ಕೆಲವರು ಈಗ ಸಾಕ್ಷ್ಯ ನೀಡಲು ಮುಂದೆ ಬಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.