ಪುತ್ತೂರು: ವಿಶ್ವಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ, ಗ್ರಾಮಾಂತರ ಪ್ರಖಂಡ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಆ.16ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 15ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಪುತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಇದರ ಜೊತೆಗೆ ಆ.9ರಂದು ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ, ಆ.10ಕ್ಕೆ ಕೃಷ್ಣವೇಷ, ಶಂಖನಾದ ಸ್ಪರ್ಧೆ, ಆ.16ಕ್ಕೆ ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ಜರುಗಲಿದೆ.
ವಿಶ್ವಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಮಂಡಲದ ಅಧ್ಯಕ್ಷ ದಾಮೋದರ ಪಾಟಾಳಿ ಅವರು ಮಾತನಾಡಿ, ವಿಶೇಷವಾಗಿ ಪುತ್ತೂರು ಮೊಸರುಕುಡಿಕೆ ಉತ್ಸವದಲ್ಲಿ ಹಲವು ಸ್ಪರ್ಧೆಗಳನ್ನು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಗಿದೆ. ದೇಶವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅದಕ್ಕೆ ಸರಿಯಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆ.16ಕ್ಕೆ ಪುತ್ತೂರು ಮೊಸರುಕುಡಿಕೆ ವಿಶೇಷ ಉತ್ಸವ, ಶೋಭಾಯಾತ್ರೆ ನಡೆಯಲಿದ್ದು, ಬೆಳಗ್ಗೆ ಉದ್ದಕಂಬ ಸ್ಪರ್ಧೆ ಆರಂಭಗೊಳ್ಳಲಿದೆ. ಸಂಜೆಯಿಂದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಮತ್ತು ಹಿಂದು ಯುವಕರಿಂದ ಅಟ್ಟಿಮಡಿಕೆ ಒಡೆಯುವ ಸಾಹಸ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ.
ವಿಶ್ವಹಿಂದು ಪರಿಷದ್ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಸಾಹಸ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಬಜರಂಗದಳ ಪುತ್ತೂರು ಜಿಲ್ಲೆ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಸುಂದರ ರಥದೊಂದಿಗೆ ಕೊಂಬು ಕಹಳೆಯೊಂದಿಗೆ ವಿಶೇಷ ಆಕರ್ಷಣೆಯಾಗಿ ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ತಾಲೀಮು ಪ್ರದರ್ಶನ, ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಕೀಲುಕುದುರೆ, ಗೊಂಬೆ, ನಾಸಿಕ್ ಬ್ಯಾಂಡ್, ಶ್ರೀರಾಮ್ ಚೆಂಡೆ ಮತ್ತು ವಿವಿಧ ಕಲಾತಂಡಗಳು ಭಾಗವಹಿಸಲಿದೆ.
10 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಭಾರತಮಾತೆಯ ಚಿತ್ರ ಬಿಡಿಸುವುದು, ಸ್ಮರಣಶಕ್ತಿ, ದೇಶಭಕ್ತಿಗೀತೆ, ಗುಂಡೆಸೆತ, ಭಗವದ್ಗೀತೆ ಕಂಠಪಾಠ, ಮಡಿಕೆ ಒಡೆಯುವ ಸ್ಪರ್ಧೆಗಳು, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ರಂಗವಲ್ಲಿ ಸ್ಪರ್ಧೆ, ಗುಂಡೆಸೆತ, 8 ಜನರ ತಂಡದ ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಆ.9ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ ಬೆಳಿಗ್ಗೆ ಗಂಟೆ 10 ರಿಂದ ದಿ.ಟಿ.ರಾಧಾಕೃಷ್ಣ ಭಟ್ ಇವರ ಸ್ಮರಣಾರ್ಥ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಮಂದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಾಮೋದರ್ ಪಾಟಾಳಿ ಅವರು ತಿಳಿಸಿದರು. ಕಬಡ್ಡಿ ಪಂದ್ಯಾಟದ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ರೈ ಆನಾಜೆ, ಕಾರ್ಯದರ್ಶಿ ಗಣೇಶ್ ಕಾಮತ್, ವಿಶ್ವಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಅದ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.