ಧರ್ಮಸ್ಥಳ, ಆ. 6: ವರದಿಗೆ ತೆರಳಿದ್ದ ಮೂವರು ಯೂಟ್ಯೂಬರ್ಗಳ ಮೇಲೆ 50ಕ್ಕೂ ಹೆಚ್ಚು ಜನರ ಗುಂಪೊಂದು ಭಾನುವಾರ ಇಲ್ಲಿನ ಧರ್ಮಸ್ಥಳ-ಪಾಂಗಾಳ ರಸ್ತೆ ಸಮೀಪ ಮಾರಣಾಂತಿಕ ಹಲ್ಲೆ ನಡೆಸಿದೆ ಬಗೆ ವರದಿಯಾಗಿದೆ. ಹಲ್ಲೆಯಿಂದ ಗಾಯಗೊಂಡ ಯೂಟ್ಯೂಬರ್ಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸಂಚಾರಿ ಸ್ಟುಡಿಯೋ’, ‘ಯುನೈಟೆಡ್ ಮೀಡಿಯಾ’ ಹಾಗೂ ‘ಕುಡ್ಲ ರಾಂಪೇಜ್’ ಯೂಟ್ಯೂಬ್ ಚಾನೆಲ್ ಗಳ ವರದಿಗಾರರೇ ಹಲ್ಲೆಗೊಳಗಾದವರು.
ಬಿಗ್ ಬಾಸ್ ಖ್ಯಾತಿಯ ರಜತ್ ಅವರು 12 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಚಿತ್ರೀಕರಿಸಲು ಪಾಂಗಾಳ ತಿರುವಿನಲ್ಲಿ ಕಾಯುತ್ತಿದ್ದಾಗ, ಏಕಾಏಕಿ ಬಂದ 50ಕ್ಕೂ ಹೆಚ್ಚು ಜನರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಯೂಟ್ಯೂಬರ್ಗಳ ಬಳಿಯಿದ್ದ ಕ್ಯಾಮೆರಾವನ್ನು ಸಂಪೂರ್ಣವಾಗಿ ಪುಡಿಗಟ್ಟಿ, ನಾಶಪಡಿಸಿದ್ದಾರೆ ಎಂದೂ ಗಾಯಾಳುಗಳು ಆರೋಪಿಸಿದ್ದಾರೆ. ಸರಕಾರ ರಚಿಸಿರುವ ಎಸ್ ಐಟಿ ಕಳೆದ 8 ದಿನಗಳಿಂದ ಉತ್ಖನನ ಕಾರ್ಯ ಮಾಡುತ್ತಿದೆ, ಈ ಮೂರು ಯೂಟ್ಯೂಬ್ ಚಾನೆಲ್ ಗಳು ಇದರ ವರದಿಯನ್ನು ನಿರಂತರವಾಗಿ ಮಾಡುತ್ತಿದ್ದವು.
ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬವೊಂದರ ಮೇಲೆ ಸುಳ್ಳು ಆರೋಪ ಮಾಡಿ ವಿಡಿಯೋ ಮಾಡುತ್ತಿದ್ದೀರಿ ಎಂದು ಹಲ್ಲೆ ಮಾಡಿದ್ದಾರೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ತೀರದ ಪಾಂಗಳ ಎಂಬಲ್ಲಿ ಯೂಟ್ಯೂಬರ್ಸ್ ಹಾಗೂ ಮತ್ತೊಂದು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹಲ್ಲೆ ಕೂಡ ನಡೆಸಲಾಗಿದೆ ಎನ್ನಲಾಗಿದೆ. ಮೊದಲು ಈ ಎರಡು ಗುಂಪುಗಳ ನಡುವೆ ಮಾತಿ ಚಕಮಕಿ ನಡೆದಿದೆ. ಸುಳ್ಳು ಆರೋಪ ಮಾಡಿದ್ದಾರೆಂದು ಮೂರು ಮಂದಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.