ಬೆಂಗಳೂರು: ಧರ್ಮಸ್ಥಳದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ತಾನೇ ನೂರಾರು ಅಸಹಜವಾಗಿ ಸಾವನ್ನಪ್ಪಿದ ಶವಗಳನ್ನು ಹೂತಿರುವುದಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದನು. ಇದಾದ ಬಳಿಕ ಎಸ್‌ಐಟಿ ತನಿಖೆ ಆರಂಭಿಸಿದ್ದು, ಇದೀಗ ನೇತ್ರಾವತಿ ನದಿ ದಡದಲ್ಲಿ ಕಳೇಬರ ಪತ್ತೆಕಾರ್ಯವನ್ನು ಎಸ್‌ಐಟಿ ತಂಡ ಚುರುಕುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಗಲಾಟೆ ಕೂಡ ಉಂಟಾಗಿತ್ತು. ಸ್ಥಳೀಯ ಯೂಟೂಬರ್ಸ್ ಹಾಗೂ ಖಾಸಗೀ ಚಾನೆಲ್‌ನ ವರದಿಗಾರನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪ ಕೇಳಿ ಬಂದಿತ್ತು. ಸದ್ಯ ಧರ್ಮಸ್ಥಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಫೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, “ಎಚ್ಚೆತ್ತುಕೊಳ್ಳೋಣ, ಶಬರಿಮಲೈ, ಶನಿಸಿಂಗ್ಲಾಪುರ, ಈಶಾ ಈಗ ಧರ್ಮಸ್ಥಳ” ಎಂದು ಫೋಸ್ಟ್ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಆಕ್ರೋಶ?
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಹಾಗೂ ಇತ್ತೀಚೆಗಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಖಂಡನೆ ವ್ಯಕ್ತಪಡಿಸಿದೆ. 2012ರಲ್ಲಿ ನಡೆದ ಕುಮಾರಿ ಸೌಜನ್ಯ ಹತ್ಯೆಯ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಆ ಸಂಬಂಧ ನಡೆದ ಎಲ್ಲಾ ಪ್ರತಿಭಟನೆಗಳಲ್ಲಿ ವಿಶ್ವಹಿಂದೂ ಪರಿಷತ್ ಭಾಗವಹಿಸಿದೆ. ಆದರೆ ಇದೀಗ ಆಗಂತುಕ ವ್ಯಕ್ತಿಯೋರ್ವ ತಾನು 10-20 ವರ್ಷದ ಹಿಂದೆ ನೂರಾರು ಹೆಣಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಆಧರಿಸಿ ಕ್ಷೇತ್ರದ ಘನತೆಗೆ ಚ್ಯುತಿ ತರುವ ಸಂಚು ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.