ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ “ಮತಗಳ್ಳತನ” ನಡೆದಿದೆ ಎಂದು ಆರೋಪಿಸಿ ನಿನ್ನೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಮ್ಮ ಆರೋಪಗಳನ್ನು ಪುನರುಚ್ಚರಿಸಿದ್ದು, ಸಹಿ ಮಾಡಿದ ಅಫಿಡವಿಟ್ ಜೊತೆಗೆ ದಾಖಲೆ ಸಲ್ಲಿಸುವಂತೆ ಕೇಳಿದ್ದಕ್ಕಾಗಿ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ರಾಹುಲ್, ಆರೋಪ ಸಾಬೀತುಪಡಿಸಲು ಬದ್ಧರಾಗಿದ್ದು, ಎಲೆಕ್ಟ್ರಾನಿಕ್ ಮತದಾರರ ಪಟ್ಟಿ ಮತ್ತು ಮತದಾನದ ವೀಡಿಯೊಗ್ರಫಿಯನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ. “ನಾನು ಲೋಕಸಭೆಯಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 2024 ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂಬುದನ್ನು ಬಹಿರಂಗಪಡಿಸಿದ್ದು ನೂರಕ್ಕೆ ನೂರು ಸತ್ಯ ಎಂದು ಅವರು ಪುನರುಚ್ಚರಿಸಿದ್ದಾರೆ.
ಇನ್ನು ಮತ ಕಳ್ಳತನದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಮತಗಳ್ಳತನವಾಗಿದೆ. ಹೀಗಾಗಿ ಮೋದಿ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿ ಆಗಿದೆ. ಮತಗಳ್ಳತನದ ವಿರುದ್ಧ ಕರ್ನಾಟಕ ರಾಜ್ಯದಿಂದ ಆರಂಭವಾಗಿರುವ ಪ್ರತಿಭಟನಾ ಅಭಿಯಾನ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತ ಕಳ್ಳತನದ ವಿರುದ್ಧ ಹೋರಾಡುವಲ್ಲಿ ಇಂಡಿ ಮೈತ್ರಿಕೂಟ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ರವಾನಿಸಿದೆ. ಬಿಜೆಪಿ ಮತಗಳ್ಳತನ ನಡೆಸಿದ್ದಕ್ಕಾಗಿ ತಾವು 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದ್ದಾರೆ.