ಮಂಗಳೂರು: ಪವಿತ್ರ ಯಾತ್ರಾ ಕೇಂದ್ರವಾದ ಧರ್ಮಸ್ಥಳದಲ್ಲಿ ಶವ ಹೂತ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಈಗಾಗಲೇ ಸರ್ಕಾರ ಈ ಪ್ರಕರಣ ಭೇದಿಸಲು ಎಸ್ಐಟಿ (SIT) ರಚನೆ ಮಾಡಿದ್ದು, ಎಸ್ಐಟಿ ತಂಡ ನಿರಂತರವಾಗಿ ತನಿಖೆ ಮಾಡುತ್ತಿದೆ. ಇದೀಗ ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ತನಿಖೆಗೆ ಇಳಿದಿದೆ. ಧರ್ಮಸ್ಥಳದ ಆಘಾತಕಾರಿ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ NHRC ತಂಡ ತನಿಖೆ ಮಾಡಲು ಮುಂದಾಗಿದೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗ ತಂಡ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಭೇಟಿ ನೀಡಲಿದ್ದು, ಪ್ರಕರಣದ ತನಿಖೆಯ ಪ್ರಗತಿಯನ್ನು ಪರಿಶೀಲಿಸಲಿದೆ. ಈ ಭೇಟಿಯು ಧರ್ಮಸ್ಥಳದ ಶವ ಹೂತ ಆರೋಪಗಳ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲು ಮಹತ್ವದ ಕ್ರಮವಾಗಿದೆ.
38 ವರ್ಷಗಳ ಹಿಂದೆ (1987) ನಡೆದ ಪದ್ಮಲತಾ ಅವರ ಅಸಹಜ ಸಾವಿನ ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ, ಅವರ ಸಹೋದರಿ ಇಂದ್ರಾವತಿ ಅವರು ಎಸ್‌ಐಟಿ ಕಚೇರಿಗೆ ದೂರು ಸಲ್ಲಿಸಲು ಆಗಮಿಸಿದ್ದಾರೆ.
ಇಂದ್ರಾವತಿ ಅವರು ದೂರರ್ಜಿಯೊಂದಿಗೆ ಎಸ್‌ಐಟಿ ಕಚೇರಿಗೆ ಬಂದಿದ್ದು, 1987ರಲ್ಲಿ ನಡೆದ ಈ ಕೊಲೆ ಪ್ರಕರಣದ ಬಗ್ಗೆ ಸಿಒಡಿ ತನಿಖೆ ನಡೆಸಿದ್ದರೂ, ಯಾವುದೇ ಪ್ರಮುಖ ಸುಳಿವು ಸಿಗದೆ ಕೇಸ್ ಮುಚ್ಚಲಾಗಿತ್ತು. ಆ ಸಮಯದಲ್ಲಿ ಪದ್ಮಲತಾ ಅವರ ಶವವನ್ನು ದಫನ ಮಾಡಲಾಗಿತ್ತು.
ಪ್ರಕರಣವನ್ನು ಉತ್ಖನನ ಮಾಡಿ ಮರು ತನಿಖೆ ನಡೆಸುವಂತೆ ಕೋರಿ, ಸಿಪಿಐಎಂ ಮುಖ್ಯಸ್ಥ ಬಿ.ಎಂ. ಭಟ್ ನೇತೃತ್ವದಲ್ಲಿ ಇಂದ್ರಾವತಿ ಅವರು ದೂರು ಸಲ್ಲಿಸಲು ಆಗಮಿಸಿದ್ದರು. ಆದರೆ, ಕೆಲವು ಎಸ್‌ಐಟಿ ಅಧಿಕಾರಿಗಳು ಲಭ್ಯವಿರದ ಕಾರಣ, ನಂತರ ಮತ್ತೆ ಬರಲು ಸೂಚಿಸಿದ್ದರಿಂದ ಇಂದ್ರಾವತಿ ಮತ್ತು ಇತರರು ಸ್ಥಳದಿಂದ ವಾಪಸಾಗಿದ್ದಾರೆ.