ಪುತ್ತೂರು, ಆಗಸ್ಟ್ 12, 2025: ಪ್ರತಿ ವರ್ಷದಂತೆ ಈ ವರ್ಷವೂ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಪುತ್ತೂರು ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಆಗಸ್ಟ್ 16 ರಂದು ಬೆಳಿಗ್ಗೆ ನಡೆಯಲಿದೆ. ಇದು 27ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮವಾಗಿದ್ದು, ಇದುವರೆಗಿನ ರೂಢಿಯಂತೆ, ಭಜನಾ ಕಾರ್ಯಕ್ರಮ, ಬಾಲಕೃಷ್ಣನ ತೊಟ್ಟಿಲ ಸಂಭ್ರಮ, ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಮೋಹನ್ ಕೆ ಹೇಳಿದರು. ಅವರು ಮಂಗಳವಾರ (ಆಗಸ್ಟ್ 12) ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 27ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ರೂಪುರೇಖೆಯ ವಿವರ ನೀಡಿದರು.
27ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ವಿವರ ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದಲ್ಲಿ ಆಗಸ್ಟ್ 16 ರಂದು ಬೆಳಿಗ್ಗೆ 8 ಗಂಟೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ. ಅದಾಗಿ, ಬೆಳಿಗ್ಗೆ 9 ಗಂಟೆಗೆ ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ಸಡಗರ ಇರಲಿದೆ. ಬೆಳಿಗ್ಗೆ 9.30ಕ್ಕೆ ವಿವೇಕಾನಂದ ಶಿಶುಮಂದಿರದ ಆವರಣದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗಕ್ಕೆ ಶೋಭಾಯಾತ್ರೆ ಹೊರಡಲಿದೆ. ವಿವೇಕಾನಂದ ಶಿಶು ಮಂದಿರದ ಮಕ್ಕಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಪುಟಾಣಿಗಳು ಶ್ರೀಕೃಷ್ಣ ರಾಧೆಯರ ವೇಷ ಧರಿಸಿ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಭಜನಾ ತಂಡಗಳೂ ಮೆರವಣಿಗೆಯಲ್ಲಿ ಇರಲಿದ್ದು, ಮೆರವಣಿಗೆ ಮೆರಗು ಹೆಚ್ಚಿಸಲಿದೆ.
ಬೆಳಿಗ್ಗೆ 10.30ಕ್ಕೆ ಶೋಭಾಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗಕ್ಕೆ ತಲುಪಿದ ಬಳಿಕ ಅಲ್ಲಿ ಹಾಕಿರುವ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ಟ ಅವರು ದೀಪ ಪ್ರಜ್ವಲನೆ ಮಾಡಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.