ಬೆಳ್ತಂಗಡಿ : ಬೆಳ್ಳಂಬೆಳಗ್ಗೆ ಇನ್ನೋವಾ ಕಾರಿನಲ್ಲಿ ದನ ಸಾಗಾಟ ಮಾಡಿ ಹಿಂದೂ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಎಂಬಲ್ಲಿ ನಡೆದಿದೆ
ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುವುದನ್ನು ಕಂಡು ಸ್ಥಳೀಯ ಹಿಂದೂ ಕಾರ್ಯಕರ್ತರು ಕಾರನ್ನು ಗುರುವಾಯನಕೆರೆಯಲ್ಲಿ ತಡೆಹಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರಿನ ಮುಡಗೇರಿಯಿಂದ ಮೂರು ದನಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ತುಂಬಿಕೊಂಡು, ನಕಲಿ ನಂಬರ್ ಪ್ಲೇಟ್ (KA 19 MP 2084) ಅಳವಡಿಸಿಕೊಂಡಿದ್ದ ಇನ್ನೋವಾ ಕಾರನ್ನು ಅತಿವೇಗದಲ್ಲಿ ಮತ್ತು ದುಡುಕಿನಿಂದ ಚಾರ್ಮಾಡಿ ಮೂಲಕ ಮಂಗಳೂರಿಗೆ ಚಲಾಯಿಸಿಕೊಂಡು ಆರೋಪಿಗಳು ಹೋಗುತ್ತಿದ್ದಾಗ, ಮಾಹಿತಿ ಪಡೆದ ಬೆಳ್ತಂಗಡಿ ಠಾಣೆ ಪೊಲೀಸರು ಗುರುವಾಯನಕೆರೆಯಲ್ಲಿ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ.
ಆದರೆ, ಆರೋಪಿಗಳು ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಕಾರು ಆಟೋರಿಕ್ಷಾ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ. ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಾಹನದಲ್ಲಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದಾರೆ. ಕಾರನ್ನು ಚಾಲನೆ ಮಾಡುತ್ತಿದ್ದ ಮೂಡಬಿದ್ರೆಯ ಸುವರ್ಣ ನಗರ ನಿವಾಸಿ ಆರಿಫ್ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬಂದಿದೆ. ಪರಾರಿಯಾದ ಆರೋಪಿಗಳಾದ ರಜ್ವಾನ್ (30) ಮತ್ತು ಸಾಯಿಲ್ (22), ಇವರೂ ಮೂಡಬಿದ್ರೆಯ ಸುವರ್ಣ ನಗರ ನಿವಾಸಿಗಳೆಂದು ತಿಳಿದುಬಂದಿದೆ.