ಕಾರ್ಕಳ: ಕಂಬಳ ಕೂಟದ ಅತ್ಯಂತ ಜನಪ್ರಿಯ, ಅತಿ ಹೆಚ್ಚು ಪ್ರಶಸ್ತಿ ವಿಜೇತ ಪಟ್ಟಿಯಲ್ಲಿ ಅಗ್ರಗಣ್ಯ ಕೋಣ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರು ʼಚೆನ್ನʼ ಎಂಬ ಹೆಸರಿನ ಕೋಣ ಗುರುವಾರ (ಆ.14) ಅಸುನೀಗಿದೆ.
ವಯೋಸಹಜ ಅಸೌಖ್ಯದ ಕಾರಣದಿಂದ ಚೆನ್ನ ಅಸುನೀಗಿದೆ. ಗುರುವಾರ ಸಂಜೆ ಅದರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವರದಿ ಹೇಳಿದೆ.
ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಚೆನ್ನ ಎಂಬ ಕೋಣವನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು ಸುಮಾರು 22 ವರ್ಷಗಳ ಹಿಂದೆ ತಮ್ಮ ಹಟ್ಟಿಗೆ ಕರೆ ತಂದಿದ್ದರು. ಮೂಡಬಿದಿರೆಯ ಕೋಟಿ-ಚೆನ್ನಯ ಕಂಬಳದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟರಿಗೆ ಚೆನ್ನ ಕೋಣ ಮೆಡಲ್ ಜಯಿಸಿಕೊಟ್ಟಿತ್ತು. ಬಳಿಕ ಸೀನಯರ್ ಆದಾಗ ಚೆನ್ನ ತೆರಳಿದ್ದು ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟರ ಹಟ್ಟಿಗೆ.
ಹಲವು ಕಡೆಗಳಲ್ಲಿ ಸನ್ಮಾನ ಪಡೆದಿದ್ದ ಚೆನ್ನನ ಒಂದು ವಿಶೇಷ ಎಂದರೆ ಆತನ ಗುಣ. 25 ವರ್ಷ ಪ್ರಾಯದ ಚೆನ್ನ ಒಂದೇ ಒಂದು ಬಾರಿ ಯಾರಿಗೂ ನೋವು ಮಾಡಿದ ಕೋಣವಲ್ಲ.
ಕಂಬಳದ ದಿನ ಹಟ್ಟಿಯಲ್ಲಿ ಬಿಟ್ಟ ಕೂಡಲೇ ಮನೆಯ ತುಳಸಿ ಕಟ್ಟೆಗೆ ಸುತ್ತು ಬಂದು ಟೆಂಪೋ ಏರುತ್ತಿದ್ದ. ಅಂತಹ ಚೆನ್ನ ಇದೀಗ ಓಟ ಬಿಟ್ಟು ಚಿರನಿದ್ರೆಗೆ ಜಾರಿದ್ದಾನೆ.