ಪುತ್ತೂರು: ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರ್ಯಾಂಡ್ ತಂದುಕೊಟ್ಟ ಪಿಲಿ ರಾಧಣ್ಣ ಸೆ.6 ರಂದು ನಸುಕಿನ ಜಾವ ನಿಧನರಾದರು. ಸಾಂಪ್ರದಾಯಿಕ ಹುಲಿ ವೇಷ, ಹುಲಿಯ ಹೆಜ್ಜೆ ಜೊತೆಗೆ ಗಾಂಭೀರ್ಯತೆಯೊಂದಿಗೆ ಆರಾಧನೆಯನ್ನು ಅಪ್ಪಿಕೊಂಡು ಬದುಕಿದ ರಾಧಾಣ್ಣ. ಆಡಂಬರಗಳಿಗೆ ಎಡೆ ಮಾಡದೇ ಹುಲಿವೇಷದಲ್ಲಿ ತನ್ನದೆ ಛಾಪು ಮೂಡಿಸಿದ ಪುಣ್ಯಾತ್ಮ
ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ (59ವ) ಅವರನ್ನು ಅನಾರೋಗ್ಯದ ಹಿನ್ನಲೆ ಸೆ.5 ರಂದು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಸೆ.6 ರಂದು ನಸುಕಿನ ಜಾವ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗು ಪುತ್ರಿಯನ್ನು ಅಗಲಿದ್ದಾರೆ.
ಹತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರಾದ ರಾಧಾಕೃಷ್ಣ ಶೆಟ್ಟಿಯವರು ಹುಲಿ ಆಚರಣೆಯ ಸಂಪ್ರದಾಯಕ್ಕೆ ಎಳ್ಳಷ್ಟು ಚ್ಯುತಿ ಬಾರದ ಹಾಗೆ ವೇಷ ಹಾಕುವುದು ಮತ್ತು ಕುಣಿಯುವುದು ಅವರ ವಿಶೇಷವಾಗಿತ್ತು.
65 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಇದ್ದದ್ದು ಎರಡು ಪಿಲಿ. ಒಂದು ಪಿಲಿ ಸಂಕಪ್ಪಣ್ಣ, ಇನ್ನೊಂದು ಪಿಲಿ ಗಂಗಣ್ಣ. ಪಿಲಿ ಸಂಕಪ್ಪ ಶೆಟ್ಟಿ ಅವರ ಪುತ್ರನೇ ಪಿಲಿ ರಾಧಣ್ಣ. ಸಂಕಪ್ಪ ಅವರು ಸುಮಾರು 30 ವರ್ಷಗಳ ಕಾಲ ಕುಣಿದವರು. ರಾಧಾಕೃಷ್ಣ ಶೆಟ್ಟಿ ಅವರಿಗೆ 9 ವರ್ಷ (4ನೇ ತರಗತಿ) ಇರುವಾಗ ತಂದೆ ಸಂಕಪ್ಪ ಅವರ ಜೊತೆ ಕಿನ್ನಿಪಿಲಿ ವೇಷಧಾರಿಯಾಗಿ ಸೇರಿಸಿಕೊಂಡರು. ಅಲ್ಲಿಂದ ಪಿಲಿ ವೇಷ ಶುರು. ಅಪ್ಪ-ಮಗ ಇಬ್ಬರು 10 ವರ್ಷಗಳ ಕಾಲ ಜತೆ ಜತೆಯಾಗಿ ಹೆಜ್ಜೆ ಹಾಕಿದರು. ಕಿನ್ನಿ ಪಿಲಿಯಾಗಿ ಟೋಪಿ ಹಾಕಿಕೊಂಡು ಹೊರಟ ಪುಟ್ಟ ಬಾಲಕ ಮುಂದೆ ಪಿಲಿ ರಾಧಣ್ಣ ಆಗಿ ಗುರುತಿಸಿಕೊಂಡರು.