ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಬಿಜೆಪಿ ಪದಾಧಿಕಾರಿಗಳಾಗಿ ಪಕ್ಷದಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಮುಖರ ಸಭೆಯು ಪರಿವಾರ ಸೇವಾ ಟ್ರಸ್ಟ್ ನ ಕಛೇರಿಯಲ್ಲಿ ನಡೆಯಿತು. ಪುತ್ತಿಲ ಪರಿವಾರ ಭಾರತೀಯ ಜನತಾ ಪಾರ್ಟಿ ಜೊತೆ ವಿಲೀನವಾದ ಸಂಧರ್ಭದಲ್ಲಿ ಪಕ್ಷದ ಮತ್ತು ಸಂಘದ ಪ್ರಮುಖ ನಾಯಕರು ಅರುಣ್ ಪುತ್ತಿಲರಿಗೆ ನೀಡಿದ ಭರವಸೆಯನ್ನು ಈಡೇರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಕ್ಷದ ಪದಾಧಿಕಾರಿಗಳು ತಮ್ಮ ಮುಂದಿನ ನಡೆಯ ಬಗ್ಗೆ ಅಭಿಪ್ರಾಯ ಮಂಡಿಸಿದರು.
ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಂಸದರು,ರಾಜ್ಯಧ್ಯಕ್ಷರು, ಜಿಲ್ಲಾಧ್ಯಕ್ಷರು, ನೀಡಿದ ಭರವಸೆ ಈಡೇರಿಸದಿರುವುದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಕೆರಳಿಸಿದೆ.ಕೇಸರಿ ಶಾಲನ್ನು ಹಾಕುವ ದೇವ ದುರ್ಲಭ ಕಾರ್ಯಕರ್ತರನ್ನು ಅವಮಾನಿಸಿ ಹೇಳಿಕೆ ನೀಡುವ ಸಂಘ ಮತ್ತು ಪಕ್ಷದ ನಾಯಕರ ನಡೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಕೇಸರಿ ಶಾಲನ್ನು ಹಾಕುವ ದೇವ ದುರ್ಲಭ ಕಾರ್ಯಕರ್ತರನ್ನು ಅವಮಾನಿಸಿ ಹೇಳಿಕೆ ನೀಡುವ ಸಂಘ ಮತ್ತು ಪಕ್ಷದ ನಾಯಕರ ನಡೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ತಕ್ಷಣ ಪಕ್ಷದ ಮತ್ತು ಸಂಘದ ಹಿರಿಯರು ಸಮನ್ವಯ ಸಾಧಿಸಿ ಪರಿಹಾರ ಮಾಡಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಲಾಯಿತು ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಟ್ರಸ್ಟಿನ ಅಧ್ಯಕ್ಷರು ಮತ್ತು ತಂಡ ತಗೊಳ್ಳುವ ನಿರ್ಣಯಕ್ಕೆ ತಾವೆಲ್ಲರೂ ಬದ್ದರಾಗಿರುವುದಾಗಿ ತಿಳಿಸಿದರು. ಸಂಘ ಶತಾಬ್ದಿಯ ನಿಮಿತ್ತ ನವಂಬರ್ ತಿಂಗಳಿನಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವದ ಯಶಸ್ವಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಕೊಳ್ಳಬೇಕೆಂದು ನಿರ್ಣಯಿಸಲಾಯಿತು.
ಪುತ್ತೂರಿನಲ್ಲಿ ಮತ್ತೆ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಂದ ಸಭೆ ನಡೆದ ಬಗ್ಗೆ ವರದಿಯಾಗಿದೆ. ಈ ನಂತರ ಅರುಣ್ ಕುಮಾರ್ ಪುತ್ತಿಲ ಅವರು ಯಾವುದೇ ಹೇಳಿಕೆ, ಪ್ರತಿಕ್ರಿಯೆ ನೀಡಿರುವುದು ಓದಿಲ್ಲ. ಹಾಗಾಗಿ ಅರುಣ್ ಅವರಿಗೂ ಈಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಇರುವುದು ಬಹುತೇಕ ಖಚಿತವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಡೆದ ಬೆಳವಣಿಗೆಯ ನಂತರ ಬಿಜೆಪಿ ಭದ್ರಕೋಟೆಗೆ ಹೊಡೆತ ಬಿದ್ದಿರುವುದು ಸತ್ಯ. ಅದಾದ ನಂತರ ಲೋಕಸಭಾ ಚುನಾವಣೆಯ ಹೊತ್ತಿಗೆ ರಾಜಿಸಂಧಾನ ನಡೆದದ್ದೂ ಹೌದು. ನಂತರ ಅರುಣ್ ಕುಮಾರ್ ಅವರನ್ನು ಬಿಜೆಪಿಯು ಅಷ್ಟಕ್ಕಷ್ಟೇ ಇರಿಸಿಕೊಂಡದ್ದು ದೂರದಿಂದ ನೋಡುವಾಗಲೇ ಅರಿವಿಗೆ ಬರುತ್ತದೆ. ಹೀಗಾಗಿ ಈಗ ಮತ್ತೆ ಅಸಮಾಧಾನಗಳು ಹೊರಬರುತ್ತಿದೆ.
ಮುಂದಿನ ಕೆಲವು ಸಮಯದಲ್ಲಿ ರಾಜ್ಯದಲ್ಲೂ ರಾಜಕೀಯ ಬದಲಾವಣೆ ನಡೆಯಲಿದೆ ಎನ್ನುವ ವಿಶ್ಲೇಷಣೆಯ ಹೊತ್ತಿನಲ್ಲೇ ಪುತ್ತೂರಿನಲ್ಲೂ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರು ಸಜ್ಜಾಗುತ್ತಿದ್ದಾರೆ ಎನ್ನಬಹುದು.
ಆದರೆ, ಅರುಣ್ ಕುಮಾರ್ ಅವರಿಗೆ ಈ ಬಾರಿ ಮೊದಲಿನಂತೇ ಬೆಂಬಲರಿಗರು ಇದ್ದಾರಾ..? ಎನ್ನುವ ಸಂದೇಹ ಎಲ್ಲರಲ್ಲೂ ಇದೆ. ಅನೇಕ ಜನರಲ್ಲಿ ಮಾತನಾಡುವಾಗ ಈಗಲೂ ಅರುಣ್ ಅವರ ಬಗ್ಗೆ ಅನುಕಂಪ ಇದೆ. “ಹೀಗೆ ಮಾಡಬಾರದಿತ್ತು ಬಿಜೆಪಿ” ಎನ್ನುವವರು ಹೆಚ್ಚು.
ಇದಕ್ಕೆ ಕಾರಣ ಇದೆ. ಅರುಣ್ ಕುಮಾರ್ ಅವರು ರಾಜಕೀಯವಾಗಿ, ಅಭಿವೃದ್ಧಿ ವಿಚಾರವಾಗಿ ಹೆಚ್ಚು ಪರಿಣತರು ಅಲ್ಲದೇ ಇದ್ದರೂ ಜನಪರವಾಗಿ ಇದ್ದವರು. ಏನೇ ಆದರೂ ಜನರ ಜೊತೆಗೆ ನಿಲ್ಲುವವರು. ಯಾರೇ ಎಲ್ಲೇ ಸಿಕ್ಕಿದರೂ,”ಅಣ್ಣ ಹೇಗಿದ್ದೀರಿ” ಎಂದು ಕೇಳುವ ಸ್ವಭಾವದವರು. ಉಪಕಾರ ಆಗದೇ ಇದ್ದರೂ ಸಂಕಷ್ಟ ವಿಚಾರಿಸುವವರು. ಜನರಿಗೆ ಬೇಕಾದ್ದು ಇಷ್ಟೇ. ಜನಮನ್ನಣೆ ಬರಲು ಇಷ್ಟೇ ಬೇಕಾದ್ದು.
ಬಿಜೆಪಿಯು ಪುತ್ತೂರು ಅಂತಲ್ಲ ದ ಕ ಜಿಲ್ಲೆಯ ಬಹುತೇಕ ಎಲ್ಲಾ ಕಡೆಯಲ್ಲೂ ಗೆಲುವಿನ ಓಟದ ತುತ್ತ ತುದಿಯಲ್ಲಿದೆ. ದ ಕ ಜಿಲ್ಲೆಯಲ್ಲಿ ಹಿಂದೆ ಕಾಂಗ್ರೆಸ್ ಯಾವ ಮಾದರಿಯಲ್ಲಿತ್ತೋ ಅದೇ ಮಾದರಿಯಲ್ಲಿದೆ. ಈ ಮಾದರಿಯನ್ನು ಅಂದು ಮುರಿಯಲು ಬಿಜೆಪಿ ಶಕ್ತವಾಗಿತ್ತು. ಈಗ ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ..! ಈಗ ಬಿಜೆಪಿಯು, ಧರ್ಮವೊಂದೇ ಸಾಕು ಗೆಲ್ಲುವುದಕ್ಕೆ ಎನ್ನುವ ಭಾವನೆಯಲ್ಲಿದ್ದಂತೆ ಕಾಣುತ್ತಿದೆ.
ಬಿಜೆಪಿ ಕಟ್ಟುವುದಕ್ಕೆ ಕಾರಣರಾದ ಅನೇಕರು ಮೌನವಾಗಿದ್ದಾರೆ, ಅವರ ಬಳಿ ಸುಮ್ಮನೆ ಕುಳಿತು ಮಾತನಾಡಿದರೆ ವಿಷಾದ ವ್ಯಕ್ತಪಡಿಸುತ್ತಾರೆ. ಯಾಕೆ ಹೀಗೆ ಮಾಡ್ತಾರೆ ಅಂತ ಕೇಳುತ್ತಾರೆ..!.
ಈಗ, ಅರುಣ್ ಕುಮಾರ್ ಪುತ್ತಿಲ ಅವರು ಕೇವಲ ಧರ್ಮಾಧಾರಿತವಾಗಿ ಮಾತನಾಡುವುದರ ಬದಲಾಗಿ ಅಭಿವೃದ್ಧಿ ಬಗ್ಗೆಯೂ ಮಾತನಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ತುಂಬಿಹೋಗಿದೆ. ಆಡಳಿತ ಪಕ್ಷವೂ, ವಿಪಕ್ಷವೂ ಮಾತನಾಡುತ್ತಿಲ್ಲ.
ದ ಕ ಜಿಲ್ಲೆಯ ಅಡಿಕೆ ಬೆಳೆಗಾರರು ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಕೊಳೆರೋಗ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ವಿವಿಧ ಸಮಸ್ಯೆ ಇದೆ,
ಕಾರ್ಮಿಕ ವರ್ಗವೂ ಸಮಸ್ಯೆಯಲ್ಲಿದೆ, ಕೆಂಪುಕಲ್ಲು, ಮರಳು ಮೊದಲಾದ ಸಮಸ್ಯೆಗಳು ಇವೆ, ಯುವ ಮಿತ್ರರಿಗೆ ಉದ್ಯೋಗದ ಸಮಸ್ಯೆ ಇದೆ, ಜಿಲ್ಲೆಯ ರಸ್ತೆಯು ಹದಗೆಟ್ಟಿದೆ, ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆಗಳು ಇವೆ. ಇದೆಲ್ಲರ ಬಗ್ಗೆಯೂ ಮಾತನಾಡುತ್ತಾ ಜನರ ಬಳಿಗೆ ಅರುಣ್ ಕುಮಾರ್ ಅವರಿಗೆ ಹೋಗಲು ಸಾಧ್ಯ ಇದೆಯೇ..?
ಧರ್ಮದ ಬಗ್ಗೆ ಒಲವು ಇರಲಿ, ಧರ್ಮಾಧಾರಿತವಾಗಿ ಮತ ಪಡೆಯುವ ಮನಸ್ಥಿತಿ ಜಿಲ್ಲೆಯಿಂದ ದೂರವಾಗಲಿ, ಅಭಿವೃದ್ಧಿ ಆಧಾರಿತವಾಗಿ ಮತ ಕೇಳುವ, ಯುವಕರ ಮನಸ್ಸನ್ನು ಬದಲಾಯಿಸುವ ಅಗತ್ಯ ಇದೆ. ಈಗಿನ ದಕ ಜಿಲ್ಲೆಯ ವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ಅರುಣ್ ಕುಮಾರ್ ಅವರು ಈಗ ಈ ಬಗ್ಗೆ ಯೋಚಿಸುವುದು ಸೂಕ್ತ… ಗೆಲುವು ಸಾಧ್ಯ ಇದೆ… ಒಂದು ವೇಳೆ ಗೆಲ್ಲದೇ ಇದ್ದರು ಜನಪರವಾದ ಹೆಜ್ಜೆ ಸಾಧ್ಯ ಇದೆ. ಜನರಿಗೆ ಮೂಲಭೂತ ವ್ಯವಸ್ಥೆ ಒದಗಿಸಿದ ನೆಮ್ಮದಿಯೂ ಇರಬಹುದು.