ಕಟೀಲು: ಅಕ್ಟೋಬರ್ 1. ರಿಂದ ಜಾರಿಗೆ ಬರುವಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ. ಈ ದರ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ ಎಂದು ದೇವಸ್ಥಾನದ ಅನುವಂಶಿಕ ಅರ್ಚಕ ಹಾಗೂ ಮೊಕೇಸರ ವಾಸುದೇವ ಅಸ್ರಣ್ಣ ಅವರ ಸಹೋದರ ಹರಿನಾರಾಯಣ ದಾಸ ಅಸ್ರಣ್ಣ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಗಳನ್ನು ಅವರು ‘ಸಂಪೂರ್ಣ ಸುಳ್ಳು’ ಎಂದು ತಳ್ಳಿಹಾಕಿದ್ದಾರೆ.
ಕಟೀಲು ದೇವಸ್ಥಾನದ ಸೇವಾ ದರ ಪರಿಷ್ಕರಣೆಯು ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ನಡೆದಿದೆ. ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳಿಗೆ ದೇವಸ್ಥಾನದ ಹಣವನ್ನು ಬಳಸಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಹರಿನಾರಾಯಣ ದಾಸ ಅಸ್ರಣ್ಣ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಹರಿನಾರಾಯಣ ದಾಸ ಅಸ್ರಣ್ಯ. “ದೇವಸ್ಥಾನ ಮತ್ತು ಸರ್ಕಾರದ ವಿರುದ್ಧ ಮಸಿ ಬಳಿಯುವ ಉದ್ದೇಶದಿಂದ ಕಿಡಿಗೇಡಿಗಳು ಈ ಸುಳ್ಳು ಪ್ರಚಾರವನ್ನು ನಡೆಸುತ್ತಿದ್ದಾರೆ.” ಎಂದು ಆರೋಪಿಸಿದರು. “ಸೇವಾ ದರಗಳನ್ನು ದೇವಸ್ಥಾನದ ಆಡಳಿತ ಮಂಡಳಿಯೇ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಿದೆ. ಇದರಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲ. ಆದರೂ. ಮುಖ್ಯಮಂತ್ರಿಯವರ ಹೆಸರನ್ನು ತಪ್ಪಾಗಿ ಬಳಸಿ ಅಪಪ್ರಚಾರ ನಡೆಸಲಾಗುತ್ತಿದೆ.” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ, ದೇವಸ್ಥಾನಕ್ಕೆ ನೀಡುವ ಕಾಣಿಕೆ ಸರ್ಕಾರದ ಖಜಾನೆಗೆ ಸೇರುತ್ತದೆ. ಗ್ಯಾರಂಟಿ ಯೋಜನೆಗಳಿಗಾಗಿ ದರ ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ ದೇವಸ್ಥಾನಕ್ಕೆ ಕೇವಲ ಹೂವು ಮತ್ತು ಎಳನೀರು ನೀಡಿ’ ಎಂಬ ಸಂದೇಶಗಳು ಹರಡುತ್ತಿವೆ. ಇವೆಲ್ಲವೂ ಸುಳ್ಳು ಎಂದು ಖಂಡಿಸಿರುವ ಹರಿನಾರಾಯಣ ದಾಸ ಅಸ್ರಣ್ಣ. ಕಟೀಲು ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವು ದೇವಸ್ಥಾನದ ಬ್ಯಾಂಕ್ ಖಾತೆಯಲ್ಲೇ ಉಳಿಯುತ್ತದೆ ಮತ್ತು ಅದನ್ನು ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಸಲಾಗುತ್ತದೆ ಎಂದು ಒತ್ತಿ ಹೇಳಿದರು. ಸರ್ಕಾರಕ್ಕೆ ಯಾವುದೇ ಹಣವನ್ನು ವರ್ಗಾಯಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನದಿಂದ ಸಂಗ್ರಹವಾಗುವ ಹಣವನ್ನು ದೇವಾಲಯದ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಉಳಿದ ಮೊತ್ತದ ಶೇ.10ರಷ್ಟನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಲಾಗುತ್ತದೆ. ಇದನ್ನು ದೇವಸ್ಥಾನದ ನೌಕರರ ಮಕ್ಕಳ ಶಿಕ್ಷಣ, ಪಿಂಚಣಿ, ಮತ್ತು ಸಣ್ಣ ದೇವಾಲಯಗಳ ಜೀರ್ಣೋದ್ಧಾರಕ್ಕೆ ಬಳಸಲಾಗುತ್ತದೆ. ಈ ಹಣವು ಹಿಂದೂ ಧರ್ಮದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದು, ಸರ್ಕಾರದ ಇತರ ಯೋಜನೆಗಳಿಗೆ ಅಥವಾ ಬೇರೆ ಧರ್ಮಗಳಿಗೆ ಬಳಕೆಯಾಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ಈ ಸ್ಪಷ್ಟಿಕರಣದ ಮೂಲಕ ಕಟೀಲು ದೇವಸ್ಥಾನದ ಆಡಳಿತ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದೆ.