ಪಾಕಿಸ್ತಾನ ನೀಡಿದ್ದ 147 ರನ್ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಇಡೀ ಟೂರ್ನಿಯಲ್ಲೇ ಅನುಭವಿಸದಂತಹ ಭಾರೀ ಆಘಾತ ಎದುರಿಸಿತು. ಗೋಲ್ಡನ್ ಫಾರ್ಮ್ನಲ್ಲಿದ್ದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 6 ಎಸೆತಗಳಲ್ಲಿ 5 ರನ್ಗಳಿಸಿ ಫಹೀಮ್ ಅಶ್ರಫ್ ಬೌಲಿಂಗ್ನಲ್ಲಿ ರೌಫ್ಗೆ ಕ್ಯಾಚ್ ನೀಡಿ ಔಟ್ ಆದರು. ಇಡೀ ಟೂರ್ನಿಯಲ್ಲಿ ಇದು ಅವರ ಮೊದಲ ಸಿಂಗಲ್ ಡಿಜಿಟ್ ವೈಫಲ್ಯವಾಯಿತು.
ಇನ್ನು ನಾಯಕ ಸೂರ್ಯಕುಮಾರ್ ಯಾದವ್ (1) ಹಾಗೂ ಶುಭ್ಮನ್ ಗಿಲ್ (12) ತಮ್ಮ ವೈಫಲ್ಯವನ್ನ ಫೈನಲ್ನಲ್ಲೂ ಮುಂದುವರಿಸಿದರು. ಸೂರ್ಯ ಶಾಹೀನ್ ಆಫ್ರಿದಿ ಬೌಲಿಂಗ್ನಲ್ಲಿ ಸಲ್ಮಾನ್ ಅಲಿ ಆಘಾಗೆ ಕ್ಯಾಚ್ ನೀಡಿ ಔಟ್ ಆದರೆ, ಗಿಲ್ 12 ರನ್ಗಳಿಸಿ ಫಹೀಮ್ ಬೌಲಿಂಗ್ನಲ್ಲಿ ರೌಫ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ತಂಡದ ಮೊತ್ತ 20 ರನ್ಗಳಾಗುವಷ್ಟರಲ್ಲಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ 4ನೇ ವಿಕೆಟ್ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 57 ರನ್ಗಳಿಸಿದರು. ಈ ಜೋಡಿ ವಿಕೆಟ್ ಉಳಿಸಿಕೊಂಡು ಜಾಗೃತವಾಗಿ ರನ್ಗತಿ ಏರಿಸಿದರು. ಆದರೆ ಸಂಜು ಸ್ಯಾಮ್ಸನ್ 21 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24 ರನ್ಗಳಿಸಿ ಅಬ್ರಾರ್ ಅಹ್ಮದ್ ಬೌಲಿಂಗ್ನಲ್ಲಿ ಫಹೀಮ್ ಅಶ್ರಫ್ಗೆ ಕ್ಯಾಚ್ ನೀಡಿ ಔಟ್ ಆದರು.
ಸಂಜು ಔಟ್ ಆದಾಗ ಭಾರತ ತಂಡದ ಮೊತ್ತ 77ಕ್ಕೆ 4 ಆಗಿತ್ತು. ಇನ್ನು 46 ಎಸೆತಗಳಲ್ಲಿ 70 ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಒಂದಾದ ತಿಲಕ್ ವರ್ಮಾ ಹಾಗೂ ಶಿವಂ ದುಬೆ 5ನೇ ವಿಕೆಟ್ ಜೊತೆಯಾಟದಲ್ಲಿ 60 ರನ್ಗಳಿಸಿ ತಂಡವನ್ನ ಗೆಲುವಿನ ಸನಿಹಕ್ಕೆ ತಂದರು. ಉತ್ತಮವಾಗಿ ಆಡುತ್ತಿದ್ದ ದುಬೆ ತಂಡದ ಗೆಲುವಿಗೆ 10 ರನ್ ಅಗತ್ಯವಿದ್ದಾಗ ಫಹೀಮ್ ಬೌಲಿಂಗ್ನಲ್ಲಿ ಶಾಹೀನ್ ಅಫ್ರಿದಿಗೆ ಕ್ಯಾಚ್ ನೀಡಿ ಔಟ್ ಆದರು.
ಕೊನೆಯ ಓವರ್ನಲ್ಲಿ ಭಾರತದ ಗೆಲುವಿಗೆ 10 ರನ್ ಅಗತ್ಯವಿತ್ತು. ರೌಫ್ ಎಸೆದ 20ನೇ ಓವರ್ನಲ್ಲಿ ತಿಲಕ್ ವರ್ಮಾ ಕ್ರಮವಾಗಿ 2, 6 , 1 ರನ್ ಸಿಡಿಸಿದರೆ, 4ನೇ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಈ ಮೂಲಕ ಟೂರ್ನಿಯಲ್ಲಿ ಎಲ್ಲಾ ಮೂರು ಹಂತದಲ್ಲೂ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆಲುವಿನ ನಗೆ ಬೀರಿತು. 10ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ತಿಲಕ್ ವರ್ಮಾ ಕೊನೆಯ ವರೆಗೂ ಅಜೇಯವಾಗಿ ಉಳಿದುಕೊಂಡು ತಂಡವನ್ನ ಗೆಲುವಿನ ಗಡಿ ದಾಟಿಸಿದರು. 53 ಎಸೆತಗಳನ್ನಾಡಿದ ಎಡಗೈ ಬ್ಯಾಟರ್ 3 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 69 ರನ್ಗಳಿಸಿ ಭಾರತಕ್ಕೆ ಚಾಂಪಿಯನ್ ಪಟ್ಟ ದೊರೆಕಿಸಿಕೊಟ್ಟರು.
2023ರಲ್ಲಿ ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ಶ್ರೀಲಂಕಾ ಮಣಿಸಿ ಚಾಂಪಿಯನ್ ಆಗಿದ್ದ ಭಾರತ ತಂಡ, ಇದೀಗ ಪಾಕಿಸ್ತಾನವನ್ನ ಟಿ20 ಮಾದರಿಯಲ್ಲಿ ಬಗ್ಗುಬಡಿದು ಚಾಂಪಿಯನ್ ಆಗಿದೆ. ಇದು ಟಿ20 ಮಾದರಿಯಲ್ಲಿ ಭಾರತದ 2ನೇ ಪ್ರಶಸ್ತಿಯಾಗಿದೆ. 2016ರಲ್ಲೂ ಭಾರತ ಚಾಂಪಿಯನ್ ಆಗಿತ್ತು. ಒಟ್ಟಾರೆ ಏಷ್ಯಾಕಪ್ ಇತಿಹಾಸದಲ್ಲಿ 9ನೇ ಏಷ್ಯಾಕಪ್ ಇದಾಗಿದೆ.