ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಯೋಗ ಬಂಧುಗಳ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಮತ್ತು ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಅರ್ಚನೆಯ ಕಾರ್ಯಕ್ರಮವನ್ನು ರವಿವಾರ, ದಿನಾಂಕ 28 ಸೆಪ್ಟೆಂಬರ್ 2025 ರಂದು ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆ 4.30ಕ್ಕೆ ಆರಂಭವಾದ ಕಾರ್ಯಕ್ರಮದ ಭಜನೆಯನ್ನು ನಮ್ಮ ಮನೆ ಹಾಗೂ ಪಾಂಡುರಂಗ ಶಾಖೆ ಗುರುವಾಯನಕೆರೆಯ ಯೋಗಬಂಧುಗಳು ನಡೆಸಿಕೊಟ್ಟರೆ, ಅಮೃತ ವಚನ ವಾಚನ ಹಾಗೂ ಪಂಚಾಂಗ ಪಠಣವನ್ನು ಸಹಸ್ರಲಿಂಗೇಶ್ವರ ಶಾಖೆಯ ಯೋಗಬಂಧುಗಳಾದ ಪ್ರದೀಪ್ ಮತ್ತು ಶ್ರೀಮತಿ ವಿಜೇತ ನಡೆಸಿದರು.
ಮಾನಸಿಕ ಸಿದ್ಧತೆಯಿಂದ ಯೋಗ ಗಣಪತಿ ನಮಸ್ಕಾರದ ಅವಧಿಯ ವಿವರಣೆಯನ್ನು ಸಹಸ್ರಲಿಂಗೇಶ್ವರ ಶಾಖೆಯ ಶಿಕ್ಷಕರಾದ ಶ್ರೀಯುತ ರಾಜೇಂದ್ರ ಭಟ್ ನಿರ್ವಹಿಸಿದರೆ ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಪೂರ್ವಿ, ಯಶನ್, ಹರೀಶ್ ಹಾಗೂ ಜಯಶ್ರೀ ಇವರು ಸಹಕರಿಸಿದರು.
ನಂತರ ಸಾಮೂಹಿಕ ಯೋಗ ದುರ್ಗಾ ನಮಸ್ಕಾರದ ಆರಂಭಪೂರ್ವ ಉದ್ಘಾಟನೆಯನ್ನು ದೀಪ ಪ್ರಜ್ವಲನೆಯ ಮೂಲಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದ ಮುಖ್ಯ ಅರ್ಚಕರಾದ ಶ್ರೀಯುತ ಹರೀಶ ಉಪಾಧ್ಯಾಯ ನಡೆಸಿಕೊಟ್ಟರು. ಡಾ. ರಮ್ಯಾ ರಾಜಾರಾಮ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ಡಾ. ರಾಜಾರಾಮ್, ದಂತ ವೈದ್ಯರು, ಉಪ್ಪಿನಂಗಡಿ, ಶ್ರೀಯುತ ರಾಜೇಶ್, ಹಿರಿಯ ಯೋಗ ಬಂಧು, ಗಾಣಿಗ ಸಮುದಾಯ ಭವನ ಶಾಖೆ, ಉಪ್ಪಿನಂಗಡಿ, ಶ್ರೀಯುತ ಕೃಷ್ಣಪ್ಪ, ಕಾರ್ಯಕ್ರಮ ಸಂಚಾಲಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಉಪ್ಪಿನಂಗಡಿ, ಸಹಸ್ರಲಿಂಗೇಶ್ವರ ಶಾಖೆಯ ಯೋಗ ಬಂಧುವಾದ ಶ್ರೀಯುತ ಅವನೀಶ್ ಅವರು ಬೌದ್ದಿಕ್ ನೀಡುತ್ತಾ ನವರಾತ್ರಿ ಆಚರಣೆಯ ವಿಶೇಷ ಹಾಗೂ ದುರ್ಗಾ ಮಾತೆಯ ಒಂಬತ್ತು ರೂಪಗಳ ಬಗ್ಗೆ ಮಾಹಿತಿ ನೀಡಿದರು.
3 ಹಂತಗಳಲ್ಲಿ 9 ಬಾರಿ ಯೋಗ ದುರ್ಗಾ ನಮಸ್ಕಾರವನ್ನು ನಡೆಸುವಾಗ ವಿವರಣೆಯಲ್ಲಿ ಯತೀಶ್, ಹೇಮಾವತಿ, ಹಾಗೂ ಗಿರೀಶ್ ನಿರ್ವಹಿಸಿದರೆ, ಪ್ರಾತ್ಯಕ್ಷಿಕೆಯಲ್ಲಿ ಪ್ರತಿಮಾ, ಪ್ರಶಾಂತ್, ಶರ್ಮಿಳಾ, ಬಾಲಚಂದ್ರ, ಸುಧಾ, ಶಿವಪ್ರಸಾದ್, ಪ್ರಿಯಾ ಹಾಗೂ ಭುಜಂಗ ಸಹಕರಿಸಿದರು.
ಉಸಿರಾಟದ ಜೊತೆಗೆ ಬೆಸೆದು ಮಾಡಿದ ಯೋಗಾಭ್ಯಾಸಗಳ ನಂತರ ಶರೀರವನ್ನು ಚೈತನ್ಯ ಹಾಗೂ ಮನಸ್ಸನ್ನು ಪ್ರಶಾಂತಗೊಳಿಸುವ ಅಮೃತಾಸನವನ್ನು ಶ್ರೀಯುತ ರವೀಶ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಾರ್ಗದರ್ಶಕರು, ಮಂಗಳೂರು ಮಹಾನಗರ ಅವರು ನಡೆಸಿಕೊಟ್ಟರು.
ನಂತರ ನಡೆದ ಶ್ರೀ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣವನ್ನು ಗಾಣಿಗ ಭವನ ಶಾಖೆ, ಉಪ್ಪಿನಂಗಡಿ ಹಾಗೂ ಶ್ರೀ ಭಾರತಿ ಶಾಖೆ, ಆಲಂಕಾರು ಇದರ ಯೋಗ ಬಂಧುಗಳು ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆಯನ್ನು ಪಾಂಡುರಂಗ ಶಾಖೆ, ಗುರುವಾಯನಕೆರೆಯ ಶ್ರೀಮತಿ ಲತಾ ನಿರ್ವಹಿಸಿದರೆ ಶ್ರೀಯುತ ಕೃಷ್ಣಪ್ಪ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ಶಿಕ್ಷಣ ಸಹಪ್ರಮುಖ ಹಾಗೂ ಕಾರ್ಯಕ್ರಮ ಸಂಚಾಲಕರು, ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ, ಆಲಂಕಾರು, ಕೊಯಿಲ, ನೆಲ್ಯಾಡಿ, ಗುರುವಾಯನಕೆರೆ, ಪೊಳಲಿ ಹಾಗೂ ಮಂಗಳೂರು ಭಾಗದ 291 ಯೋಗ ಬಂಧುಗಳು ಹಾಗೂ 45 ಯೋಗೇತರ ಬಂಧುಗಳು ಭಾಗವಹಿಸಿದ್ದರು. 7.15ರ ವೇಳೆಗೆ ಪ್ರಸಾದೋಪಹಾರದೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮವು ಸಮಿತಿಯ ಮಂಗಳೂರು ಮಹಾನಗರ ಸಂಚಾಲಕರು, ಮಂಗಳೂರು ನಗರ ಪ್ರಮುಖರು, ಉಪ್ಪಿನಂಗಡಿ ನಗರ ಸಂಚಾಲಕರು, ನಗರ ಪ್ರಮುಖರುಗಳು ಹಾಗೂ ಶಾಖಾ ಶಿಕ್ಷಕರುಗಳ ಮಾರ್ಗದರ್ಶನದಲ್ಲಿ ಮೂಡಿ ಬಂದಿತು.