ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಮತ್ತು ದ.ಕ. ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆ ಮೂಡುಬಿದಿರೆ ಕಂಬಳ ಕ್ರೀಡಾಂಗಣದ ಬಳಿಯ ಸೃಷ್ಟಿ ಗಾರ್ಡನ್’ ಸಭಾಂಗಣದಲ್ಲಿ ಸೆ.28ರಂದು ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ 2025-26ನೇ ಸಾಲಿನ ಕಂಬಳಗಳ ದಿನಾಂಕ ನಿಗದಿ ಪಡಿಸಲಾಯಿತು.
ಮುಖ್ಯಮಂತ್ರಿಯವರ ಆದೇಶದಂತೆ ರಾಜ್ಯ ಸರಕಾರ ಕಂಬಳಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ನೀಡಿ ಪುರಸ್ಕರಿಸಿರುವುದಕ್ಕೆ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ರಾಜ್ಯ ಕಂಬಳ ಅಸೋಸಿಯೇಶನ್ ಮತ್ತು ಕೇಂದ್ರ ಸರಕಾರದಿಂದ ಕೂಡ ಕಂಬಳಕ್ಕೆ ವಿಶೇಷ ಮಾನ್ಯತೆ ನೀಡಲು ಕಂಬಳ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಪ್ರಕಟಿಸಿದರು.
ಕಳೆದ ಸಾಲಿನ ಕಂಬಳಗಳಿಗೆ ಸರಕಾರದಿಂದ ತಲಾ ೨ ಲಕ್ಷ ರೂ. ಒದಗಿ ಬರಲಿದೆ ಎಂದು ತಿಳಿಸಿದ ಅವರು ಕಂಬಳಕ್ಕೆ ನಮ್ಮ ಹಿರಿಯರ ಕೊಡುಗೆ ಅಪಾರವಾಗಿದೆ. ಈ ಕಂಬಳವನ್ನು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಮಾಜಿ ಅಧ್ಯಕ್ಷ ಪಿ. ಆರ್. ಶೆಟ್ಟಿ, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೊಟ್ಯಾನ್, ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ತೀರ್ಪುಗಾರರ ಸಮಿತಿ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಪ್ರಮುಖರಾದ ಶಾಂತರಾಮ್ ಶೆಟ್ಟಿ, ಶ್ರೀಕಾಂತ್ ಭಟ್, ಚಂದ್ರಹಾಸ್, ಸಾಧು ಸನಿಲ್ ಮುಂತಾದವರು ಉಪಸ್ಥಿತರಿದ್ದರು.
ನ.15ರಂದು ಪಣಪಿಲ ಕಂಬಳ ನಡೆಯಲಿದ್ದು ನ.22ರಂದು ಕೊಡಂಗೆ, ನ.29ರಂದು ಕಕ್ಕೆಪದವು, ಡಿ.6ರಂದು ಹೊಕ್ಕಾಡಿ, ಡಿ.7ರಂದು ಬಳ್ಳಮಂಜ, ಡಿ.13ರಂದು ಬಾರಾಡಿ, ಡಿ.20ರಂದು ಮೂಲ್ಕಿ, ಡಿ.27ರಂದು ಮಂಗಳೂರು, ಜ.3ರಂದು ಮಿಯ್ಯಾರು, ಜ.10ರಂದು ನರಿಂಗಾಣ, ಜ.17ರಂದು ಅಡ್ವೆ, ಜ.24ರಂದು ಮೂಡುಬಿದಿರೆ, ಜ.31ರಂದು ಐಕಳ, ಫೆ.7ರಂದು ಪುತ್ತೂರು, ಫೆ.14ರಂದು ಜೆಪ್ಪು, ಫೆ.21ರಂದು ವಾಮಂಜೂರು, ಫೆ.28ರಂದು ಎರ್ಮಾಳು, ಮಾ.7ರಂದು ಬಂಟ್ವಾಳ, ಮಾ.15ರಂದು ಬಂಗಾಡಿ, ಮಾ.21ರಂದು ವೇಣೂರು, ಮಾ.28ರಂದು ಉಪ್ಪಿನಂಗಡಿ, ಎ.೪ರಂದು ಗುರುಪುರ, ಎ.11ರಂದು ಬಕ್ಕುಂಜೆ, ಎ.18ರಂದು ಹರೇಕಳ ಮತ್ತು ಎ.25ರಂದು ಬಡಗಬೆಟ್ಟು ಕಂಬಳ ನಡೆಯಲಿದೆ.