ಮನೆ ಹೊರಗೆ ಒಣಗಲೆಂದು ಹಾಕಲಾಗ್ತಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ವ್ಯಕ್ತಿಯೋರ್ವನನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ನಗರದ ತಂತಿ ನಗರದ ನಿವಾಸಿ, ಸೌಂಡ್ ಸಿಸ್ಟಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂದು ಗರುತಿಸಲಾಗಿದೆ. ಕದ್ದ ಒಳ ಒಡುಪುಗಳನ್ನ ಈತ ವಾರದ ಬಳಿಕ ಅದೇ ಮನೆಯ ಬಳಿ ಎಸೆದು ಹೋಗುತ್ತಿದ್ದ ಎಂಬ ವಿಷಯವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮನೆ ಮುಂದೆ ಒಣಗಿಸುತ್ತಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆಯಾಗುತ್ತಿರುವ ಘಟನೆ ವೀರಾಪುರ ಓಣಿಯಲ್ಲಿ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿತ್ತು. ತಾವೇ ಸರಿಯಾಗಿ ಬಟ್ಟೆ ಒಣಗಿಸದ ಕಾರಣ ಗಾಳಿಗೆ ಅವು ಹಾರಿ ಹೋಗಿರಬಹುದು ಎಂದು ಆರಂಭದಲ್ಲಿ ಮಹಿಳೆಯರು ಭಾವಿಸಿದ್ದರು. ಆದರೆ ಇದು ಕೇವಲ ಒಂದು ಮನೆಯ ಸಮಸ್ಯೆ ಅಲ್ಲ. ಬದಲಾಗಿ ಏರಿಯಾದಲ್ಲಿಯೇ ಈ ರೀತಿ ಘಟನೆಗಳು ನಡೆಯುತ್ತಿವೆ ಎಂಬ ವಿಷಯ ಗೊತ್ತಾದಾಗ, ಸಿಸಿ ಕ್ಯಾಮರಾಗಳ ಪರಿಶೀಲನೆಗೆ ನಿವಾಸಿಗಳು ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಒಳ ಉಡುಪುಗಳು ನಾಪತ್ತೆಯಾಗ್ತಿರೋದಕ್ಕೆ ಅಸಲಿ ಕಾರಣ ಬಹಿರಂಗಗೊಂಡಿದೆ. ಯುವಕನೋರ್ವ ಅವುಗಳನ್ನು ಕದ್ದು ಹೋಗುವ ದೃಶ್ಯಗಳನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.
ಘಟನೆ ಸಂಬಂಧ ಅರೆಸ್ಟ್ ಆಗಿರೋ ಕಾರ್ತಿಕ್, SSLCವರೆಗೆ ಓದಿದ್ದ. ಸೌಂಡ್ ಸಿಸ್ಟಂ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ ಈತ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ರಾತ್ರಿ ಸಮಯದಲ್ಲಿ ಮನೆ ಮುಂದೆ ಬಟ್ಟೆ ಹಾಕಿದ್ದನ್ನು ಗಮನಿಸಿಸುತ್ತಿದ್ದ ಈತ, ಕೇವಲ ಮಹಿಳೆಯರ ಒಳ ಉಡುಪುಗಳನ್ನಷ್ಟೇ ಕದಿಯುತ್ತಿದ್ದ. ಬಳಿಕ ಅವುಗಳನ್ನು ತನ್ನ ಪ್ಯಾಂಟ್ ನೊಳಗೆ ಇಟ್ಟುಕೊಂಡು ವಿಕೃತಾನಂದ ಅನುಭವಿಸುತ್ತಿದ್ದ. ವಾರದ ನಂತರ ಯಾರ ಮನೆಯ ಬಟ್ಟೆಗಳನ್ನು ಕದ್ದಿರುತ್ತಿದ್ದನೋ, ಅದೇ ಮನೆಯ ಬಳಿ ಅವನ್ನು ಎಸೆದು ಹೋಗುತ್ತಿದ್ದ ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ.
ವಿಷಯ ಬೆಳಕಿಗೆ ಬರ್ತಿದ್ದಂತೆ ಆರೋಪಿ ವಿರುದ್ಧ ಸ್ಥಳೀಯರು ಬೆಂಡಿಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಕಾರ್ತಿಕ್ ನನ್ನು ಈಗ ಬಂಧಿಸಲಾಗಿದೆ. ಸೈಕೋಪಾತ್ ಕಂಬಿ ಹಿಂದೆ ಹೋದ ಕಾರಣ ಸ್ಥಳೀಯರು ನಿಟ್ಟುಸಿರು ಬಬಿಟ್ಟಿದ್ದಾರೆ.