ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಕ್ಷಣ ಹಿಂದೆ ಮುಂದೆ ನೋಡದೆ ಪರಿಚಯ ಮಾಡಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಒಂದೊಳ್ಳೆ ಫೋಟೊ ಹಾಕಿ ಹಾಯ್ ಅಂದಕೂಡಲೇ ಸ್ನೇಹ ಮಾಡಿಕೊಂಡು ಸಲುಗೆ ಬೆಳೆಸುತ್ತಾರೆ. ಹೀಗೆ ಫೇಸ್ಬುಕ್ನಲ್ಲಿ ಯುವಕನ ಪರಿಚಯ ಮಾಡಿಕೊಂಡ ಮಹಿಳೆಯೊಬ್ಬರು ಆತನ ಸ್ನೇಹ ಸಂಪಾದಿಸಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ನಗರದ ಸುಂಕದಕಟ್ಟೆ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಸ್ವರೂಪ್ ಎಂಬ ಯುವಕನನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಿದ್ದರು. ನಂತರ ಇಬ್ಬರೂ ಸ್ನೇಹಿತರಾಗಿದ್ದು, ಅದೇ ಸ್ನೇಹ ಇಬ್ಬರ ನಡುವೆ ಆತ್ಮೀಯ ಸಲುಗೆ ಬೆಳೆಯುವಂತೆ ಮಾಡಿತ್ತು. ಈ ವೇಳೆ ಮಹಿಳೆಯ ಒಂದಷ್ಟು ಫೋಟೊ ತೆಗೆದುಕೊಂಡಿದ್ದ ಸ್ವರೂಪ್, ಅದನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಲು ಮುಂದಾಗಿದ್ದನಂತೆ. ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಸುಮಾರು 8 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದಿದ್ದಾನೆ. ಹೀಗೆ ಫೋಟೊ ವೀಡಿಯೋ ಇದೆ ಎಂದು ಬ್ಲಾಕ್ಮೇಲ್ ಮಾಡಿದ ಸ್ವರೂಪ್ ಮಹಿಳೆಯಿಂದ ಲಕ್ಷ ಲಕ್ಷ ರೂ. ಹಣ ಪಡೆದಿದ್ದ.
ಮಹಿಳೆ ಹಣ ವಾಪಸ್ ಕೇಳಿದ್ದಕ್ಕೆ ತನ್ನ ಸ್ನೇಹಿತ ಶೂಟ್ ಗಿರಿ ಎಂಬುವನ ಮೂಲಕ ಬೆದರಿಕೆ ಹಾಕಿಸಿದ್ದ. ಮಹಿಳೆ ಭೇಟಿ ಮಾಡಿದ ಶೂಟ್ ಗಿರಿ, ಸ್ವರೂಪ್ ನಮ್ಮ ಹುಡುಗ. ಅವನು ಕೊಟ್ಟಷ್ಟು ಹಣ ತಗೊಳ್ಳಬೇಕು ಎಂದು ಸೆಟಲ್ಮೆಂಟ್ ಮಾಡಲು ಹೋಗಿದ್ದ. ಸ್ನೇಹಿತನ ಬೆದರಿಕೆಯಿಂದ ಆತಂಕಕ್ಕೊಳಗಾದ ಮಹಿಳೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಶೂಟ್ ಗಿರಿ ಹಾಗೂ ಸ್ವರೂಪ್ ವಿರುದ್ದ ಎಫ್ಐಆರ್ ದಾಖಲು ಮಾಡಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಫೇಸ್ಬುಕ್ ಸ್ನೇಹಿತ ಎಂದು ಹಣ ಕೊಟ್ಟ ತಪ್ಪಿಗೆ ಮಹಿಳೆ ಪಾಡುಪಡುವಂತಾಗಿದೆ. ಹಣ ಪೀಕಿಸಿದ್ದಷ್ಟೇ ಅಲ್ಲದೆ, ಆರೋಪಿಯು ಮಹಿಳೆಗೆ ಜೀವ ಬೆದರಿಕೆ ಸಹ ಹಾಕಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.