ಪುತ್ತೂರು: ಕೊಳಚೆಯಾದ ಪ್ರದೇಶವನ್ನು ಸುಂದರ ತಾಣವನ್ನಾಗಿ ಸದ್ದಿಲ್ಲದೆ ಮಾಡುವ ತಂಡವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆ.
ಪುತ್ತೂರು ನಗರ ಸಭೆ, ಸಾಹಸ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಕಸದ ರಾಶಿ ತುಂಬಿದ್ದ ಪುತ್ತೂರಿನ ಐದು ಕಡೆಗಳಲ್ಲಿ ಈ ತಂಡ ಸ್ವಚ್ಛತಾ ಕಾರ್ಯ ಕೈಗೊಂಡು ಕಸದ ಬೆಟ್ಟದಂತಿದ್ದ ಜಾಗಕ್ಕೆ ಆಕರ್ಷಕ ಬಣ್ಣ ಬಳಿದು, ಗಿಡಗಳನ್ನು ನೆಟ್ಟು ಸುಂದರ ತಾಣವನ್ನಾಗಿ ಮಾಡಲಾಗುತ್ತಿದೆ.
ಪುತ್ತೂರು ನಗರದ ಎಂ.ಟಿ. ರಸ್ತೆ, ಸಿಟಿ ಹಾಸ್ಪಿಟಲ್ ರಸ್ತೆ, ಬ್ರಹ್ಮನಗರ ಮತ್ತು ಅಶ್ವಿನಿ ಸರ್ಕಲ್ ಬಳಿ ಸಾರ್ವಜನಿಕರು ಕಸಗಳನ್ನು ಎಸೆದು ಆ ಪ್ರದೇಶವನ್ನೇ ಕೊಳಚೆ ಕೂಪವನ್ನಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಈ ತಂಡ ಅಂತಹ ಜಾಗಗಳನ್ನ ಗುರುತಿಸಿ ಸ್ವಚ್ಛ ಮಾಡುವುದರ ಜೊತೆಗೆ ಮತ್ತೆ ಆ ಜಾಗದಲ್ಲಿ ಕಸ ಸುರಿಯಬೇಕು ಎನ್ನುವ ಮನಸ್ಸೂ ಬಾರದಂತಹ ಬದಲಾವಣೆಗಳನ್ನು ಮಾಡಲಾಗುತ್ತಿದೆ!
ಸ್ವಚ್ಛತಾ ಹೀ ಸೇವಾ 2025 ಸಪ್ತಾಹದ ಅಂಗವಾಗಿ ಈ ಕಾರ್ಯ ಮಾಡಲಾಗುತ್ತಿದ್ದು, ಈ ತಂಡಕ್ಕೆ ಪುತ್ತೂರು ನಗರ ಸಭೆಯ ಪೌರಾಯುಕ್ತ ಮತ್ತು ಅಧ್ಯಕ್ಷರ ಮಾರ್ಗದರ್ಶನದಂತೆ ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರಿನಲ್ಲಿ ಇನ್ನೂ ಹಲವು ಕಡೆಗಳಲ್ಲಿ ಕಸದ ರಾಶಿಗಳು ಬೀಳುವ ಪ್ರದೇಶವನ್ನು ಗುರುತಿಸಿಕೊಂಡಿರುವ ಈ ತಂಡ ಐದು ಪ್ರದೇಶಗಳನ್ನು ಈಗಾಗಲೇ ಸ್ವಚ್ಛಗೊಳಿಸಿದೆ.