ಮಂಗಳೂರು: ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಶುಕ್ರವಾರ ಮಂಗಳೂರು ನ್ಯಾಯಾಲಯಕ್ಕೆ ಸರೆಂಡರ್ ಆಗಿದ್ದಾರೆ. 3-4 ತಿಂಗಳು ವಿಚಾರಣೆಗೆ ಹಾಜರಾಗದೆ ಭರತ್ ಕುಮ್ಡೇಲು ತಪ್ಪಿಸಿಕೊಂಡಿದ್ದರು.
ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಎರಡು ಪ್ರಕರಣದಲ್ಲಿ ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದಾರೆ. ಅಬ್ದುಲ್ ರಹಿಮಾನ್ ಕೊಲೆ ಕೇಸ್‌ನಲ್ಲಿ ಭರತ್ ಕುಮ್ಡೇಲು ತಲೆಮರೆಸಿಕೊಂಡಿದ್ದರು.
ಕಳೆದ 3-4 ತಿಂಗಳು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ಗೆ ಹಾಜರಾಗದ ಕಾರಣ ವಾರಂಟ್ ಜಾರಿಯಾಗಿತ್ತು. ಜೊತೆಗೆ ಕೆಲ ದಿನಗಳ ಹಿಂದಷ್ಟೇ ಭರತ್ ಕುಮ್ಡೇಲು ಸೇರಿದಂತೆ ಕೆಲ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು. ವಾರಂಟ್ ಮತ್ತು ಕೋಕಾ ಕೇಸ್ ಹಿನ್ನೆಲೆ ಸದ್ಯ ಭರತ್ ಜಿಲ್ಲಾ ಕೋರ್ಟ್ಗೆ ಶರಣಾಗಿದ್ದಾರೆ.
2017 ಜೂನ್ 21 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜಿನಪದವು ಗ್ರಾಮದಲ್ಲಿ ಆಟೋ ಚಾಲಕ ಮಹಮ್ಮದ್ ಅಶ್ರಫ್ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅಶ್ರಫ್ ಅಮ್ಮುಂಜೆ ಗ್ರಾಮದ ಎಸ್‌ಡಿಪಿಐ ಪಕ್ಷದ ಅಧ್ಯಕ್ಷರಾಗಿದ್ದರು. ಆಟೋ ಚಾಲಕರೂ ಆಗಿದ್ದರು. ಪಕ್ಷದ ಧ್ವಜ ಸಂಸ್ಥಾಪನ ದಿನದಲ್ಲಿ ಪಾಲ್ಗೊಂಡ ಬಳಿಕ ವಾಡಿಕೆಯಂತೆ ಶೀನಪ್ಪ ಪೂಜಾರಿ ಎಂಬುವವರ ಜೊತೆ ಬೆಂಬನಪದವಿಗೆ ಆಟೋ ಬಾಡಿಗೆಗೆ ತೆರಳಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳ ತಂಡ ಅಶ್ರಫ್ರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು.
ದಿವ್ಯರಾಜ್ ಮತ್ತು ಭರತ್ ಕುಮ್ಡೇಲು ಪ್ರಕರಣದ ಪ್ರಮುಖ ಕೊಲೆ ಆರೋಪಿಗಳು. ಅಶ್ರಫ್ ಕಲಾಯಿ ಹತ್ಯೆಗೆ ಪ್ರತೀಕಾರವಾಗಿ 2017 ಜುಲೈ 04ರಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಾಡಿವಾಳ ಹತ್ಯೆ ಮಾಡಲಾಗಿತ್ತು.
ಇನ್ನು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ ಎಂಬಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪಿಕಪ್ ವಾಹನ ಚಾಲಕನಾಗಿದ್ದ ಅಬ್ದುಲ್ ರಹಿಮಾನ್ನನ್ನು ಕೊಲೆ ಮಾಡಲಾಗಿತ್ತು. ಗೂಂಡಾ ಪಡೆ ಏಕಾಏಕಿ ತಲವಾರಿನಿಂದ ದಾಳಿ ನಡೆಸಿತ್ತು. ಪರಿಣಾಮ ಇಮ್ತಿಯಾಜ್ ಅಲಿಯಾಸ್ ಅಬ್ದುಲ್ ರಹಿಮಾನ್ ಸ್ಥಳದಲ್ಲೇ ಮೃತಪಟ್ಟಿದ್ದ.