ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಕೊನೆಗೂ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಒಟ್ಟು 3,454 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕರ್ನಾಟಕ ಸರ್ಕಾರಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. 18,171 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಈಗ ಕೇಂದ್ರ ಸರ್ಕಾರವು ಪರಿಶೀಲನೆ ನಡೆಸಿ 3,454 ಕೋಟಿ ರೂ. ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಸಕಾಲಕ್ಕೆ ಬಿಡುಗಡೆ ಮಾಡದ ಕಾರಣ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಅದರಂತೆ, ಕೇಂದ್ರ ಸರ್ಕಾರವು ಈಗ ಬರ ಪರಿಹಾರ ಘೋಷಣೆ ಮಾಡಿದೆ. ಹಾಗೆಯೇ, ನೆರೆ ರಾಜ್ಯವಾದ ತಮಿಳುನಾಡಿಗೆ 275 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ ಮಾಡಿದೆ.
ಬರ ಪರಿಹಾರ ನೀಡಲು ಒಂದು ವಾರ ಬೇಕು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. “ಒಂದು ವಾರದಲ್ಲಿ ಬರ ಪರಿಹಾರದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ಒಂದು ವಾರ ಸಮಯಾವಕಾಶ ನೀಡಬೇಕು” ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಏಪ್ರಿಲ್ 29ಕ್ಕೆ ವಿಚಾರಣೆ ಮುಂದೂಡಿತ್ತು. ಈಗ ವಿಚಾರಣೆಗೂ ಮೊದಲೇ ಬರ ಪರಿಹಾರ ಬಿಡುಗಡೆ ಮಾಡಿದೆ.
ಕರ್ನಾಟಕಕ್ಕೆ ಬರ ಪರಿಹಾರ ವಿತರಣೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ತೀವ್ರ ಜಟಾಪಟಿ ಉಂಟಾಗಿತ್ತು. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡಿತ್ತು. ತೆರಿಗೆ ಪಾಲು ನೀಡದ ಕೇಂದ್ರ ಸರ್ಕಾರವು ಬರ ಪರಿಹಾರವನ್ನೂ ನೀಡದೆ ಅನ್ಯಾಯ ಮಾಡುತ್ತಿದೆ. ಇನ್ನಾದರೂ ಬರ ಪರಿಹಾರ ನೀಡಬೇಕು ಎಂಬುದಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಗ್ರಹಿಸಿತ್ತು. ಕೊನೆಗೆ ನಮಗೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂಬುದಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು ಎಂದಿತ್ತು. “ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು. ಎರಡು ವಾರಗಳಲ್ಲಿ ಬರ ಪರಿಹಾರದ ಕುರಿತು ಉತ್ತರ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಎಂದಿಗೂ ಸ್ಪರ್ಧೆ ಇರಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಇತ್ತೀಚೆಗೆ ಹಲವು ರಾಜ್ಯ ಸರ್ಕಾರಗಳು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ಇಂತಹ ಬೆಳವಣಿಗೆಗಳು ಸರಿಯಲ್ಲ” ಎಂದು ತಿಳಿಸಿತ್ತು