ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR vs PBKS) ನಡುವೆ ಪಂದ್ಯವು ಯಾರೂ ಊಹಿಸಲಾಗದಷ್ಟು ರೀತಿಯಲ್ಲಿ ನಡೆಯಿತು. ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗೆ 261 ರನ್ ಗಳಿಸಿತು. ಬಳಿಕ ಪಂಜಾಬ್ ಕಿಂಗ್ಸ್ 18.4 ಓವರ್ಗೆ 2 ವಿಕೆಟ್ ನಷ್ಟಕ್ಕೆ 262 ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ತಂಡವೊಂದು 250ಕ್ಕೂ ಹೆಚ್ಚು ರನ್ ಮೀರಿದ ಮೊತ್ತವನ್ನು ಬೆನ್ನಟ್ಟಿದ್ದು ಇದು ಮೊದಲು ಬಾರಿ. ಅಲ್ಲದೇ ಅತ್ಯಂತ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿ ಗೆಲುವು ದಾಖಲಿಸಿದ ತಂಡ ಎಂಬ ದಾಖಲೆಯನ್ನೂ ಪಂಜಾಬ್ ನಿರ್ಮಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ, ರಾಜಸ್ಥಾನ್ ರಾಯಲ್ಸ್ ಅವರು ಐಪಿಎಲ್ 2020ರಲ್ಲಿ ಶಾರ್ಜಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮತ್ತು ಐಪಿಎಲ್ 2024ರಲ್ಲಿ ಕೆಕೆಆರ್ ವಿರುದ್ಧ ಸಾಧಿಸಿದ ಅತ್ಯಧಿಕ ಯಶಸ್ವಿ ರನ್ ಚೇಸ್ ದಾಖಲೆಯನ್ನು ಹೊಂದಿದ್ದರು. ಆದರೆ ಇದೀಗ ಈ ದಾಖಲೆಯನ್ನು ಪಂಜಾಬ್ ಮುರಿದಿದೆ.
ಇಂದು ಕೋಲ್ಕತ್ತಾ ವಿರುದ್ಧದ ಪಂಜಾಬ್ ಕಿಂಗ್ಸ್ 2 ವಿಕೆಟ್ ನಷ್ಟಕ್ಕೆ 262 ರನ್ ಅನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಶಸ್ವಿಯಾಗಿ ರನ್ ಚೇಸ್ ಮಾಡಿದ ತಂಡ ಎಂಬ ದಾಖಲೆ ನಿರ್ಮಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಅವರ 224 ರನ್ ಚೇಸ್ ಮಾಡಿದ್ದ ದಾಖಲೆಯನ್ನು ಉಡೀಸ್ ಮಾಡಿದೆ.
ಅತ್ಯದಿಕ ರನ್ ಚೇಸ್ ಮಾಡಿದ ತಂಡ: ಪಂಜಾಬ್ ಕಿಂಗ್ಸ್ 262 ರನ್, ರಾಜಸ್ಥಾನ್ ರಾಯಲ್ಸ್ 224 ರನ್, ರಾಜಸ್ಥಾನ್ ರಾಯಲ್ಸ್ 224 ರನ್, ಮುಂಬೈ ಇಂಡಿಯನ್ಸ್ 219 ರನ್, ರಾಜಸ್ಥಾನ್ ರಾಯಲ್ಸ್ 215 ರನ್, ಸನ್ರೈಸರ್ಸ್ ಹೈದರಾಬಾದ್ 215 ರನ್ ಚೇಸ್ ಮಾಡುವ ಮೂಲಕ ಟಾಪ್ ಸ್ಥಾನದಲ್ಲಿದೆ.
ಈ ವರ್ಷದಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ 287 ರನ್ ಗಳಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಪಾಲಾದರೆ, ತಂಡವೊಂದು ಯಶಸ್ವಿಯಾಗಿ ರನ್ ಚೇಸ್ ಮಾಡಿದ ತಂಡದ ದಾಖಲೆ 262 ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ ಪಾಲಾಗಿದೆ.
ಪಂಜಾಬ್ ಕಿಂಗ್ಸ್ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೇರ್ಸ್ಟೋ ಭರ್ಜರಿ ಜೊತೆಯಾಟವಾಡಿದರು. ಕೇವಲ 5.6 ಓವರ್ಗೆ ಮೊದಲ ವಿಕೆಟ್ಗೆ 93 ರನ್ ಗಳಿಸುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿದರು. ಈ ವೇಳೆ ಪ್ರಭಾಸಿಮ್ರಾನ್ ಸಿಂಗ್ 20 ಎಸೆತದಲ್ಲಿ 5 ಸಿಕ್ಸ್ ಮತ್ತು 4 ಬೌಂಡರಿ ಸಹಿತ 54 ರನ್ ಗಳಿಸಿ ಸ್ಪೋಟಕ ಬ್ಯಾಟಿಂಗ್ ಮಾಡಿದರು.
ಬಳಿಕ ರಿಲ್ಲೆ ರೂಸ್ಸೋ 16 ಎಸೆತದಲ್ಲಿ 2 ಸಿಕ್ಸ್ ಮತ್ತು 1 ಫೋರ್ ಮೂಲಕ 26 ರನ್ ಗಳಿಸಿದರು. ಇತ್ತ ಶಶಾಂಕ್ ಸಿಂಗ್ 27 ಎಸೆತದಲ್ಲಿ 8 ಸಿಕ್ಸ್ 2 ಫೋರ್ ಮೂಲಕ ಅಜೇಯ 67 ರನ್ ಸಿಡಿಸಿದರೆ, ಜಾನಿ ಬೇರ್ಸ್ಟೋ 48 ಎಸೆತದಲ್ಲಿ 9 ಸಿಕ್ಸ್ 8 ಫೋರ್ ಮೂಲಕ 108 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.