ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ತಲೆ ಮೇಲೆ ಇರುಮುಡಿ ಹೊತ್ತು, ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮಹಿಳಾ ರಾಷ್ಟ್ರಪತಿಯಾಗಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ ಮೊದಲಿಗರು ಎಂದು ಮುರ್ಮು ದಾಖಲೆ ಬರೆದಿದ್ದಾರೆ. ಅಲ್ಲದೆ ಅಯ್ಯಪ್ಪ ಸನ್ನಿಧಿಗೆ ಭೇಟಿ ನೀಡಿದ ಭಾರತದ ಎರಡನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ.
ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಷ್ಟ್ರಪತಿಗಳು ಪಂಪಾ ತಲುಪಿ ಪ್ರಯಾಣ ಬೆಳೆಸಿದರು. ಅವರು ಪಂಪಾ ನದಿಯಲ್ಲಿ ಕಾಲು ತೊಳೆದು ಗಣಪತಿ ದೇಗುಲ ಸೇರಿದಂತೆ ಸಮೀಪದಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿದರು. ಗಣಪತಿ ದೇಗುಲದ ಶಾಂತಿ ವಿಷ್ಣು ನಂಬೂದರಿ ಅವರು ಮುರ್ಮು ಅವರಿಗೆ ‘ಇರುಮುಡಿ’ ಕಟ್ಟಿದರು. ಕಪ್ಪು ಸೀರೆಯ ಉಡುಪಿನಲ್ಲಿ ಮುರ್ಮು ಅವರು ತಮ್ಮ ಸಹಯಾತ್ರಿಕರೊಂದಿಗೆ ಪೂಜಾ ವಿಧಿಗಳನ್ನು ನಿರ್ವಹಿಸಿದರು. ಬಳಿಕ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದರು. ಬಳಿಕ ದೇಶದ ನಾಗರಿಕರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಅಯ್ಯಪ್ಪನ ಮುಂದೆ ಪ್ರಾರ್ಥಿಸಿದರು.
ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸಿ ದೇವಾಲಯದ ಬಳಿಯ ಕಲ್ಲಿನ ಗೋಡೆಗೆ ತೆಂಗಿನಕಾಯಿಗಳನ್ನು ಇಟ್ಟರು. ಆ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು, ದೇವಾಲಯಕ್ಕೆ ಹೋಗುವ ಸಾಂಪ್ರದಾಯಿಕ ಚಾರಣ ಮಾರ್ಗವಾದ 4.5 ಕಿ.ಮೀ ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ವಿಶೇಷ ನಾಲ್ಕು ಚಕ್ರ ವಾಹನಗಳಲ್ಲಿ ಸಾಗಿದರು. 12 ಗಂಟೆಯ ಸುಮಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯ್ಯಪ್ಪನ 18 ಪವಿತ್ರ ಮೆಟ್ಟಿಲುಗಳನ್ನು ಏರಿ ದೇವಾಲಯಕ್ಕೆ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ವಂ ಸಚಿವ ವಿ.ಎನ್.ವಾಸವನ್ ಹಾಗೂ ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಉಪಸ್ಥಿತರಿದ್ದರು.
























