ಸಾರ್ವಜನಿಕರ ಸುರಕ್ಷತೆಗಾಗಿ ಇರುವ ಪೊಲೀಸರು ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಯಾವ ರೀತಿ ಸೌಜನ್ಯದಿಂದ ವರ್ತಿಸಬೇಕೆಂದು ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಎಂಎ ಸಲೀಂ (ma salim) ಮಹತ್ವದ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.
- ಕಾರ್ಯವಿಧಾನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪೊಲೀಸ್ ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸಬಾರದು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು.
- ಸಾರ್ವಜನಿಕರ ಕುಂದುಕೊರತೆ ತಾಳ್ಮೆಯಿಂದ ಆಲಿಸಬೇಕು. ಕಾನೂನಿನ ಪ್ರಕಾರ ಕಾಲವಿಳಂಬವಿಲ್ಲದೇ ದೂರು ದಾಖಲಿಸಬೇಕು.
- ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾವಾಗಲೂ ಸೌಜನ್ಯ ಮತ್ತು ಘನತೆಯಿಂದ ವರ್ತಿಸಬೇಕು.
- ಯಾವ ಸಂದರ್ಭದಲ್ಲೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ, ಯಾವುದೇ ರೀತಿಯ ಬೇಡಿಕೆ ಇಡುವುದರಿಂದ ಅಥವಾ ಯಾವುದೇ ಅಕ್ರಮ ಸಹಾಯ, ಲಾಭವನ್ನು ಸ್ವೀಕರಿಸುವುದರಿಂದ ಸಂಪೂರ್ಣವಾಗಿ ದೂರವಿರಬೇಕು.
- ಕರ್ತವ್ಯದ ಸಮಯದಲ್ಲಿ, ಕರ್ತವ್ಯ ಮುಗಿದ ನಂತರವೂ ನೈತಿಕವಾಗಿ ಇತರರಿಗೆ ಮಾದರಿಯಾಗುವಂತೆ ಇದ್ದು ಇಲಾಖೆಯ ನೀತಿ ನಿಯಮಗಳನ್ನು ಎತ್ತಿಹಿಡಿಯಬೇಕು.
- ಸ್ಟೇಷನ್ ಹೌಸ್ ಡೈರಿಗಳು ಮತ್ತು ಕೇಸ್ ಫೈಲ್ಗಳಲ್ಲಿ ನಿಖರ ಮತ್ತು ಕೇಂದ್ರೀಕರಿಸಿದ ದಾಖಲೆಗಳನ್ನು ಕಾಯ್ದುಕೊಳ್ಳಬೇಕು ಮತ್ತು ಸಮಗ್ರವಾಗಿ ನಿರ್ವಹಿಸಬೇಕು.
- ತನಿಖಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡಬೇಕು. ಯಾವುದೇ ನಾಗರಿಕರಿಗೆ ಅನಗತ್ಯವಾಗಿ ತೊಂದರೆ ನೀಡಬಾರದು.
- ಸಂತ್ರಸ್ಥರು, ಮಹಿಳೆಯರು, ಹಿರಿಯ ನಾಗರಿಕರಿಗೆ ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿಯಿಂದ ಮತ್ತು ಸೂಕ್ಷ್ಮತೆಯಿಂದ ವರ್ತಿಸಬೇಕು.
- ಸಾರ್ವಜನಿಕರ ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರಿಕರಿಗೆ ಮಾಹಿತಿ ನೀಡಬೇಕು. ಕರ್ತವ್ಯಕ್ಕೆ ಹಾಜರಾಗುವುದು ಮತ್ತು ಅಧಿಕೃತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತಿನಿಂದ ಸಮಯ ಪಾಲನೆ ಮಾಡಬೇಕು.
- ಪೊಲೀಸ್-ಸಾರ್ವಜನಿಕ ಸಂವಹನದಲ್ಲಿ ನ್ಯಾಯಸಮ್ಮತೆಯನ್ನು ಎತ್ತಿಹಿಡಿಯಲು ಸಮವಸ್ತ್ರದ ಮೇಲೆ ಧರಿಸುವ ಕ್ಯಾಮೆರಾಗಳನ್ನು ಮತ್ತು ಲಭ್ಯವಿರುವ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು.
- ಎಲ್ಲಾ ಅಧಿಕೃತ ವಿಷಯಗಳಲ್ಲಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಪೂರ್ಣ ಸಹಕಾರವನ್ನು ನೀಡಿ, ಶೋಧ, ಬಂಧನ ಅಥವಾ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕರ ಖಾಸಗಿತನ ಮತ್ತು ಘನತೆಯನ್ನು ಗೌರವಿಸಿ, ಅಧಿಕಾರದ ದುರುಪಯೋಗ ಅಥವಾ ದೌರ್ಜನ್ಯದಿಂದ ದೂರವಿರಿ ಮತ್ತು ಸದ್ವರ್ತನೆಗೆ ಮಾದರಿಯಾಗಿರಿ.
- ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಪಾರದರ್ಶಕ, ಕಾನೂನುಬದ್ಧ ಮತ್ತು ಸಹಾನುಭೂತಿಯ ಪೊಲೀಸಿಂಗ್ ಅಭ್ಯಾಸಗಳ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು.
- ಪೊಲೀಸ್ ಕಾರ್ಯಗಳ ಮೇಲೆ ಪ್ರಭಾವ ಬೀರುವ ಅಥವಾ ಭ್ರಷ್ಟಗೊಳಿಸುವ ಯಾವುದೇ ಪ್ರಯತ್ನಗಳು ಕಂಡುಬಂದಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ.
- ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿಸಿದ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳದೇ, ಠಾಣೆಯಲ್ಲಿ ಶೂನ್ಯ ಪ್ರವ. ವರದಿಯನ್ನು ದಾಖಲಿಸಿ ಆ ನಂತರ ವ್ಯಾಪ್ತಿಯ ಆಧಾರದ ಮೇಲೆ ಸಂಬಂಧಪಟ್ಟ ಠಾಣೆಗ ದೂರನ್ನು ವರ್ಗಾಯಿಸುವುದು.
- ಮಹಿಳೆಯರನ್ನು ಸಂಜೆ 6 ಗಂಟೆಯ ನಂತರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಅಥವಾ ಹೇಳಿಕೆಯನ್ನು ನೀಡಲು ಕರೆತರಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.






















