ಮಂಗಳೂರು : ಕೋಮು ದ್ವೇಷದ ಬಗ್ಗೆ ಪ್ರಚೋದನಾಕಾರಿ ಭಾಷಣ ಆರೋಪ ಹಿನ್ನೆಲೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 79, 196, 290, 302, ಹಾಗೂ 3(5) ಕಲಂ ಅಡಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್, ಧಾರ್ಮಿಕ ದ್ವೇಷ, ಮಹಿಳೆಯರ ಘನತೆಗೆ ಧಕ್ಕೆ ತರುವ ಭಾಷಣ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.ಉಪ್ಪಳಿಗೆಯಲ್ಲಿ ದೀಪಾವಳಿ ಹಬ್ಬದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಮಾನಿಸಿ ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಮಹಿಳಾ ಹೋರಾಟಗಾರರಾದ ಮುಂಡೂರು ಗ್ರಾಮದ ಈಶ್ವರಿ ಪದ್ಮುಂಜ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಆರ್ಎಸ್ಎಸ್ ಪ್ರತಿನಿಧಿಯಾದ ಪ್ರಭಾಕರ ಭಟ್ ಅವರು ಆಡಿರುವ ಮಾತುಗಳು ಖಾಸಗಿ ನ್ಯೂಸ್ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಿದೆ. ಈ ರೀತಿ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ BNS 299 ಪ್ರಕಾರ ಅಪರಾಧವಾಗಿದೆ.
ಭಾಕರ ಭಟ್ ಅವರು ಈ ಹಿಂದೆಯೂ ಹಲವು ಬಾರಿ ಧರ್ಮಧರ್ಮಗಳನ್ನು ಎತ್ತಿಕಟ್ಟುವ ಕೋಮುಗಲಭೆ ಮಾಡಿಸುವ ಕೃತ್ಯಗಳನ್ನು ನಡೆಸಿದ್ದಾರೆ. ಇದು ತಿಳಿದು ಕೂಡ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಪ್ರಭಾಕರ ಭಟ್ಟರನ್ನು ಭಾಷಣ ಮಾಡಲು ಕರೆಯುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಕರೆದು ಒಂದು ವರ್ಗದ ಜನರ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಅಥವಾ ಆ ಕೃತ್ಯವನ್ನು ಅವಮಾನ ಮಾಡಲೆಂದೇ ಬಗೆದು, ಧಾರ್ಮಿಕ ಸ್ಥಳವನ್ನು ಅಪವಿತ್ರ ಮಾಡುವ ಕೃತ್ಯವನ್ನು BNS 298 ರಂತೆ ಕಾರ್ಯಕ್ರಮದ ಆಯೋಜಕರು ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರು ಜಂಟಿಯಾಗಿ ಮಾಡಿದ್ದಾರೆ.
ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು ಅಥವಾ ಸನ್ನೆಗಳನ್ನು ಮಾಡುವ ಕೃತ್ಯವನ್ನು ಪ್ರಭಾಕರ ಭಟ್ ಮಾಡುವ ಮೂಲಕ BNS 302 ಪ್ರಕಾರ ಕೃತ್ಯವೆಸಗಿದ್ದಾರೆ. ಆದ್ದರಿಂದ ಈ ರೀತಿಯ ದ್ವೇಷಭಾಷಣಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
‘ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ ಇದ್ದಳು. ಅವಳು 6 ನೆಯದ್ದು ಆಗಿ 7ನೇ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಕೇಳಿದ್ರಾ? ಕೇಳುವ ‘ಧೈರ್ಯವೂ ಇಲ್ಲ. ಎರಡನೇಯದಾಗಿ ಅವರು ಹೇಳ್ತಾರೆ, ಅದು ಅಲ್ಲಾಹನಿಗೋಸ್ಕರ. ನಮ್ಮ ಮಕ್ಕಳು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು’.
‘ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಅಂತ ಏನು ಹೇಳ್ತಿವಿ ಅಲ್ಲಿ ಹಿಂದೂ ಗೆಲ್ಲಲು ಸಾಧ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ಬ್ಯಾರಿಗಳದ್ದೇ ಓಟು ಇದೆ. ಹಿಂದೂಗಳು 90 ಸಾವಿರ ಇರೋದು. ಗೆಲ್ಲೊದು ಯಾವಾಗ? ಅದು ಎಲ್ಲಾ ಕಡೆಗೂ ಹತ್ತಿರ ಹತ್ತಿರ ಬರ್ತಾ ಉಂಟು. ನಾವು ಗೆಲ್ತೇವಾ? ಗೆಲ್ಲಲು ಸಾಧ್ಯವೇ ಇಲ್ಲ. ನಮ್ಮನ್ನು ಸರ್ವನಾಶ ಮಾಡ್ತಾರೆ. ಹಾಗಾಗಿ ನಮ್ಮ ಮನೆಯಲ್ಲಿ 3 ಕ್ಕಿಂತ ಕಡಿಮೆ ಮಕ್ಕಳು ಇರಬಾರದು’ ಎಂದು ಹೇಳಿದ್ದರು.
ದೀಪಾವಳಿ ಹಬ್ಬದ ಪ್ರಯುಕ್ತ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಸಾರ್ವಜನಿಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಮಹಿಳೆಯರನ್ನು ಅವಮಾನಿಸುವ ಮತ್ತು ವಿಭಿನ್ನ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ರೀತಿಯ ಭಾಷಣ ಮಾಡಿದ್ದಾರೆ ಎಂದು ಈಶ್ವರಿ ಪದ್ಮುಂಜ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು ಉಪ್ಪಳಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರಚೋದನಕಾರಿ, ಅವಮಾನಕಾರಿ, ಭಾಷಣದ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡುವಂತೆ ಮಾತಾಡಿದ್ದರ ವಿರುದ್ದ ಹಾಗೂ ಮಹಿಳೆಯರನ್ನ ಕೀಳಾಗಿ ಕಂಡು ಅವಮಾನಿಸಿದ ಭಾಷಣ ಮಾಡಿದ್ದರ ವಿರುದ್ದ ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಅವರು ಜೆ.ಎಂ.ಎಸ್. ಜಿಲ್ಲಾಧ್ಯಕ್ಷೆ ಕಿರಣಪ್ರಭಾ, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ, ಜಿಲ್ಲಾ ಮುಖಂಡರುಗಳಾದ ಯೋಗಿತ ಅಸುಂತರ ಜೊತೆ ಸಂಪ್ಯ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದರು.






















